Dharwad
ತಿಂಗಳ ಅವಧಿಯಲ್ಲಿ 3 ಕಡೆ ಕುಸಿದ ಬಿಆರ್ಟಿಎಸ್ ಯೋಜನೆಯ ಸೇತುವೆ

– ಸ್ಥಳೀಯರದಲ್ಲಿ ಹೆಚ್ಚಿದ ಆತಂಕ
ಧಾರವಾಡ: ಬಿಆರ್ಟಿಎಸ್ ಬಸ್ ಯೋಜನೆ ಎಂದರೇ ಅದು ಕರ್ನಾಟಕದ ಹೆಮ್ಮೆ ಎಂದು ಹೇಳಲಾಗುತ್ತೆ. ಅಲ್ಲದೇ ಅಹಮದಾಬಾದ್ ಬಳಿಕ ನಮ್ಮ ದೇಶದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿ ನಡುವೆ ಮಾತ್ರವೇ ಈ ಯೋಜನೆ ಯಶಸ್ವಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಹ ಲಭಿಸಿದೆ. ಆದರೆ ಈ ಯೋಜನೆಯ ಅಡಿ ನಿರ್ಮಿಸಲಾಗಿದ್ದ ಸೇತುವೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಕಡೆ ಕುಸಿತವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಉಪರಾಷ್ಟ್ರಪತಿಗಳು ಬಿ.ಆರ್.ಟಿ.ಎಸ್ ಬಸ್ ಯೋಜನೆಯನ್ನು ಉದ್ಘಾಟಿಸಿದ್ದರು. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ನಡುವೆ ತ್ವರಿತ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ 22 ಕಿಲೋ ಮೀಟರ್ ಉದ್ದದ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಯೋಜನೆಯ ಅಡಿ ಧಾರವಾಡ ನವಲೂರು ಬಳಿ ನಿರ್ಮಿಸುವ ರಸ್ತೆ ಮೇಲ್ಸೇತುವೆ ಕಳೆದ ಒಂದು ತಿಂಗಳಲ್ಲಿ ಅವಧಿಯಲ್ಲಿ ಮೂರು ಕಡೆಗಳಲ್ಲಿ ಕುಸಿತಗೊಂಡಿದೆ.
ಸದ್ಯ ಕುಸಿತ ಕೊಂಡಿರುವ ಮೂರನೇಯ ಭಾಗದ ಸೇತುವೆಯ ಕೆಳಗೆ ಒಂದು ಕಡೆ ರೈಲ್ವೆ ಓಡಾಟ ಮತ್ತೊಂದು ಕಡೆ ಜನ ಓಡಾಡುವ ರಸ್ತೆಯೂ ಇದೆ. ಹೀಗಾಗಿ ಒಂದಾದ ನಂತರ ಒಂದೊಂದು ಭಾಗದಲ್ಲಿ ಸೇತುವೆ ಕುಸಿಯುತ್ತಿರುವುದನ್ನು ನೋಡಿದ ಜನ ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿದ್ದಾರೆ.
ಕಳೆದ ತಿಂಗಳು ಏಕಾಏಕಿಯಾಗಿ ಮೇಲ್ಸೇತುವೆ ಒಂದು ಭಾಗದಲ್ಲಿನ ಸಿಮೆಂಟ್ ಪ್ಯಾನಲ್ಗಳು ಕಿತ್ತು ಬಿದ್ದು ಮಣ್ಣು ಕುಸಿದಿತ್ತು. ಅದಾದ ಒಂದೇ ವಾರದಲ್ಲಿ ಮತ್ತೊಂದು ಭಾಗವೂ ಕುಸಿದಿತ್ತು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸ್ಥಳೀಯ ಶಾಸಕ ಅರವಿಂದ ಬೆಲ್ಲದ, ಸಂಬಂಧಿಸಿದ ಗುತ್ತಿಗೆದಾರ, ಎಂಜಿನಿಯರ್ ಮೇಲೆ ಕ್ರಮ ಕೈಗೊಳ್ಳುವಂತೆ ನೇರವಾಗಿ ಸಿಎಂಗೆ ಮನವಿ ಮಾಡಿಕೊಂಡಿದ್ದರು.
ಶಾಸಕರ ಮನವಿಗೆ ಸ್ಪಂದಿಸಿದ್ದ ಸಿಎಂ ಅವರು, ತನಿಖೆ ಕೈಗೊಂಡು ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ. ಆದರೆ ತನಿಖಾ ವರದಿ ಸಿಎಂಗೆ ಮುಟ್ಟುವ ಮುನ್ನವೇ ಈ ಸೇತುವೆ ಸಂಪೂರ್ಣವಾಗಿ ಎಲ್ಲಿ ಕುಸಿಯುತ್ತೆಯೋ ಎಂಬ ಭಯ ಸ್ಥಳೀಯರಲ್ಲಿ ಎದುರಾಗಿದೆ.
