Connect with us

Cinema

ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

Published

on

ಹಳ ಕ್ರೇಜ್ ಹುಟ್ಟಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ದುನಿಯಾ ಸೂರಿ, ಡಾಲಿ ಕಾಂಬೀನೇಷನ್‍ನ ಪಕ್ಕಾ ರಾ- ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಭೋಜನ ನೀಡಿದೆ.

ಪಾಪ್ ಕಾರ್ನ್ ಮಂಕಿ ಟೈಗರ್ ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಅಂಡರ್ ವಲ್ಡ್ ಸಿನಿಮಾಗಳನ್ನು ರಾ- ಸ್ಟೈಲ್‍ನಲ್ಲಿ ತೆರೆ ಮೇಲೆ ತರುವಲ್ಲಿ ನಿಸ್ಸೀಮರಾಗಿರುವ ಸುಕ್ಕಾ ಸೂರಿ ಈ ಸಿನಿಮಾದಲ್ಲಿ ದುನಿಯಾ, ಕಡ್ಡಿಪುಡಿ ಸಿನಿಮಾಗಳಿಗೂ ಮೀರಿ ಆಳಕ್ಕೆ ಇಳಿದು ಭೂಗತ ಲೋಕದ ಪ್ರಪಂಚವನ್ನು ಪಕ್ಕಾ ರಾ ಆಗಿ ತೋರಿಸಿದ್ದಾರೆ.

ಪಾಪ್ ಕಾರ್ನ್ ಮಂಕಿ ಟೈಗರ್ ಒಬ್ಬ ಅಂಡರ್ ವಲ್ಡ್ ರೌಡಿಯ ಕಥೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ, ಪಾಪ್ ಕಾರ್ನ್ ದೇವಿ ಈ ಎರಡು ಪಾತ್ರಗಳ ಜೀವನದಲ್ಲಿ ನಡೆಯುವ ಏಳು ಬೀಳುಗಳೆ ಈ ಚಿತ್ರದ ಕಥೆ. ಇದನ್ನು ಒಂದು ಸಿನಿಮಾ ಅನ್ನೋದಕ್ಕಿಂತ ಒಬ್ಬ ವ್ಯಕ್ತಿಯ ಜರ್ನಿ ಅಂದ್ರೆ ತಪ್ಪಾಗೊಲ್ಲ. ಯಾಕಂದ್ರೆ ಇಡೀ ಸಿನಿಮಾ ಒಂದು ಜರ್ನಿಯಂತೆ ಫೀಲ್ ಕೊಡುತ್ತೆ. ಸುಕ್ಕಾ ಸೂರಿ ಸಿನಿಮಾ ಇಷ್ಟವಾಗೋದೇ ಅವ್ರು ಕಥೆ ಹೇಳುವ ಸ್ಟೈಲ್‍ಗೆ. ಈ ಚಿತ್ರ ಕೂಡ ಹೊರತಾಗಿಲ್ಲ. ಚಿತ್ರಕಥೆ ಹೊಸದೊಂದು ಅನುಭವವನ್ನು, ಥ್ರಿಲ್‍ಅನ್ನು ಪ್ರೇಕ್ಷಕರಿಗೆ ನೀಡುತ್ತೆ. ಚಿತ್ರದಲ್ಲಿ ಸೂರಿ ಸೃಷ್ಟಿಸಿರೋ ಪಾತ್ರಗಳ ಹೆಸರು ಮತ್ತೊಮ್ಮೆ ಸದ್ದು ಮಾಡಿದೆ. ಮಂಕಿ ಸೀನ, ಮೂಕ, ಗಲೀಜು, ಭದ್ರಾವತಿ ಕುಷ್ಕ, ಶುಗರ್ ಹೆಸರುಗಳು ಸಖತ್ ಮಜಾ ನೀಡುತ್ತೆ.

ಮಂಕಿ ಸೀನನಾಗಿ ಧನಂಜಯ್ ಅವರದ್ದು ರಾಕ್ಷಸ ಅಭಿನಯ. ಸೂರಿ ರಾ- ಸ್ಟೈಲ್‍ಗೆ ಅಷ್ಟೇ ರಾ- ಆದ ಅಭಿನಯ ಮಾಡಿದ್ದಾರೆ ಧನಂಜಯ್. ಈ ಮೂಲಕ ತಮ್ಮ ನಟನೆಯ ತಾಕತ್ತು ಏನು ಅನ್ನೋದನ್ನ ಮತ್ತೆ ತೆರೆ ಮೇಲೆ ಸಾಭೀತು ಮಾಡಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಗಳು ಪ್ರಭಾವಿಯಾಗಿ ನಟಿಸಿದ್ದು ಚಿತ್ರದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ.

ಅಂಡರ್ ವಲ್ಡ್ ಸಿನಿಮಾ ಅಂದ್ರೆ ಮುಖ್ಯವಾಗಿ ಹಿನ್ನೆಲೆ ಸಂಗೀತ, ಕ್ಯಾಮೆರಾ ಕೈಚಳಕ ಇವೆರಡು ಪ್ರಮುಖ ಪಾತ್ರ ವಹಿಸುತ್ತೆ. ಚಿತ್ರದಲ್ಲಿ ಬ್ಯಾಗ್ರೌಂಡ್‍ನಲ್ಲಿ ಬರುವ ಎರಡು ಸಾಂಗ್‍ಗಳು ಕಮಾಲ್ ಮಾಡಿವೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಸಿನಿಮಾಗೆ ಬೇರೆಯದ್ದೇ ಫೀಲ್ ನೀಡುತ್ತೆ. ಶೇಖರ್ ಕ್ಯಾಮೆರಾ ವರ್ಕ್ ಕೂಡ ಚಿತ್ರವನ್ನು ಶ್ರೀಮಂತಗೊಳಿಸಿದ್ದು ಆಫ್ ಸ್ಕ್ರೀನ್ ಹೀರೋಗಳಾಗಿ ಇಬ್ಬರು ಮಿಂಚಿದ್ದಾರೆ. ಒಟ್ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಮಾಸ್ ಸಿನಿ ಪ್ರಿಯರಿಗೆ ಫುಲ್ ಮೀಲ್ಸ್ ಬಡೂಟ ಅಂದ್ರೆ ತಪ್ಪಾಗೊಲ್ಲ.

ಚಿತ್ರ: ಪಾಪ್ ಕಾರ್ನ್ ಮಂಕಿ ಟೈಗರ್
ನಿರ್ದೇಶನ: ಸೂರಿ
ನಿರ್ಮಾಪಕ: ಸುಧೀರ್. ಕೆ.ಎಂ
ಸಂಗೀತ: ಚರಣ್ ರಾಜ್
ಛಾಯಾಗ್ರಹಣ: ಶೇಖರ್
ತಾರಾಬಳಗ: ಧನಂಜಯ್, ನಿವೇಧಿತಾ, ಅಮೃತ ಅಯ್ಯಂಗಾರ್, ಸಪ್ತಮಿ, ಸುಧಿ, ಇತರರು

Rating 3.5 / 5