Connect with us

Karnataka

ಅಡ್ವಾಣಿಗೆ ಭಾರತ ರತ್ನ ನೀಡಿ- ಶಂಕರಮೂರ್ತಿಯಿಂದ ಪ್ರಧಾನಿಗೆ ಪತ್ರ

Published

on

ಶಿವಮೊಗ್ಗ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವಂತೆ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಎಲ್.ಕೆ.ಅಡ್ವಾಣಿ ಅವರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಅವರ ಈ ಎಲ್ಲ ಜನಪರ ಸೇವೆ ಗುರುತಿಸಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕು. ಇದು ರಾಜ್ಯದ ಸಾವಿರಾರು ಮಂದಿಯ ಅಭಿಲಾಷೆ ಸಹ ಆಗಿದೆ ಎಂದು ಡಿ.ಎಚ್ ಶಂಕರಮೂರ್ತಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಅಡ್ವಾಣಿಯವರು ಆರ್‍ಎಸ್‍ಎಸ್, ಭಾರತೀಯ ಜನಸಂಘ ಹಾಗೂ ಬಿಜೆಪಿ ಮೂಲಕ ತಾಯ್ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಹಾಗೂ ಕೊಡುಗೆ ನೀಡಿದ್ದಾರೆ. ಸಾರ್ವಜನಿಕ ಹಾಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಮ್ಮ ವಿಶಿಷ್ಠ ಜ್ಞಾನ ಹಾಗೂ ಅನುಭವದ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಲ್ಲದೆ ಅಡ್ವಾಣಿಯವರದ್ದು ಅಪರೂಪದ ವ್ಯಕ್ತಿತ್ವವಾಗಿದೆ. ಹೀಗಾಗಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಕಳೆದ ಐದು ದಶಕಗಳಿಂದ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ, ಲಕ್ಷಾಂತರ ಜನರ ರೀತಿ ನಾನೂ ಸಹ ಅಡ್ವಾಣಿಯರಿಗೆ ಹತ್ತಿರವಾಗಿದ್ದೆ. ಹೀಗಾಗಿ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಸಾರ್ವಜನಿಕ ಭಾಷಣಗಳನ್ನು ಭಾಷಾಂತರ ಮಾಡುತ್ತಿದ್ದೆ ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ನೀಡಬೇಕೆಂಬುದು ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಸಾಮಾನ್ಯ ಜನರ ಆಶಯವಾಗಿದೆ. ಅಡ್ವಾಣಿಯವರು ಭಾರತ ರತ್ನಕ್ಕೆ ಯೋಗ್ಯರು, ಸರಿಯಾದ ವ್ಯಕ್ತಿ ಹಾಗೂ ಎಲ್ಲ ಗೌರವಗಳನ್ನು ಹೊಂದುವ ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿನ ಪಕ್ಷದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿಯವರಿಗೆ ಭಾರತ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.

ನಿನ್ನೆಯಷ್ಟೇ ಎಲ್.ಕೆ.ಅಡ್ವಾಣಿಯವರು 93ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿಯವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅಡ್ವಾಣಿಯವರ ಕಾಲು ಮುಟ್ಟಿ ನಮಸ್ಕರಿಸಿ ಮೋದಿ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಸಹ ಮೋದಿ ಅಡ್ವಾಣಿಯವರಿಗೆ ಶುಭಾಶಯ ತಿಳಿಸಿ ನೀವೇ ನಮಗೆ ಸ್ಫೂರ್ತಿ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *