Friday, 13th December 2019

ಕೊನೆ ಕ್ಷಣದಲ್ಲಿ ಸರ್ಕಾರ ಉಳಿಸಲು ಗೌಡರ ಮಾಸ್ಟರ್ ಪ್ಲ್ಯಾನ್

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತದ ಟೆನ್ಶನ್ ಆಗಿದೆ. ಇತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಜ್ಜೆ ನಿಗೂಢವಾಗಿದ್ದು, ಸರ್ಕಾರ ಉಳಿಸಲು ದೇವೇಗೌಡರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

ದೇವೇಗೌಡರು ಬಹುಮತದವರೆಗೂ ಕಾದು ನೋಡಿ ಎಂದಿದ್ದಾರೆ. ಹೀಗಾಗಿ ಜೆಡಿಎಸ್ ಶಾಸಕರಿಗೂ ದೇವೇಗೌಡರ ನಡೆ ಅರ್ಥವಾಗುತ್ತಿಲ್ಲ. ಬುಧವಾರ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಜೊತೆ ದೇವೇಗೌಡ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಹೀಗಾಗಿ ಕಾನೂನಿನ ಹೋರಾಟದಲ್ಲೇ ಸರ್ಕಾರ ಉಳಿಸಿಕೊಳ್ಳಲು ದೇವೇಗೌಡರ ರಣತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಏನದು ಮಾಸ್ಟರ್ ಪ್ಲ್ಯಾನ್?
ಬಹುಮತದ ಚರ್ಚೆಯನ್ನು ಎರಡು ಮೂರು ದಿನ ಎಳೆಯುವುದು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿಪ್ ಗೊಂದಲದ ಬಗ್ಗೆ ನಿವಾರಣೆ ಮಾಡಿಕೊಳ್ಳುವುದು. ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ಶಾಸಕರನ್ನು ಅನರ್ಹತೆ ಮಾಡಬಹುದು ಎಂದು ತೀರ್ಪು ನೀಡಿದರೆ ಅನರ್ಹತೆ ಅಸ್ತ್ರ ಬಳಸಿ ಕೊನೆ ಕ್ಷಣದಲ್ಲಿ ಸರ್ಕಾರವನ್ನು ರಕ್ಷಿಸಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.

ಬಹುಮತ ಚರ್ಚೆಯಲ್ಲಿ ಸಿಗಬಹುದಾದ ಸಮಯದಲ್ಲಿ 3-4 ಜನ ಅತೃಪ್ತರನ್ನ ಸಾಧ್ಯವಾದಷ್ಟು ಮನವೊಲಿಸುವುದು. ಬೆಂಗಳೂರಿನ ಶಾಸಕರಾದ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಚಿಕ್ಕಬಳ್ಳಾಪುರದ ಸುಧಾಕರ್ ಅವರ ಮನವೊಲಿಕೆಗೆ ಯತ್ನ ಮಾಡುವುದು. ಒಂದು ವೇಳೆ ಅತೃಪ್ತರ ಪೈಕಿ 3-4 ಜನ ಕೊನೆ ಕ್ಷಣದಲ್ಲಿ ಬೆಂಬಲ ಕೊಟ್ಟರೆ ಸರ್ಕಾರ ಸೇಫ್ ಆಗುತ್ತದೆ.

ಬಹುಮತದ ಚರ್ಚೆ ವೇಳೆ ಸಿಗಬಹುದಾದ ಸಮಯದಲ್ಲಿ ಸಾಧ್ಯವಾದಷ್ಟು ರಿವರ್ಸ್ ಆಪರೇಷನ್ ಮಾಡುವುದಕ್ಕೆ ಪ್ರಯತ್ನ ಮಾಡುವುದು. 3-4 ಜನ ಬಿಜೆಪಿ ಶಾಸಕರನ್ನು ಸೆಳೆದರೂ ಸರ್ಕಾರ ಸೇಫ್ ಆಗುತ್ತದೆ. ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಆಗದೇ ಇದ್ದರೆ ಸರ್ಕಾರ ಬಿದ್ದ ನಂತರ ಬಿಜೆಪಿ ವರಿಷ್ಠರ ಜೊತೆ ಮಾತಾಡಿ ಬಿಜೆಪಿ ಬಾಹ್ಯ ಬೆಂಬಲ ನೀಡಿ ಸರ್ಕಾರದ ಭಾಗವಾಗಿ ಪಕ್ಷವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಒಟ್ಟು 224 ಮಂದಿ ಶಾಸಕರ ಪೈಕಿ 16 ಮಂದಿ ಶಾಸಕರ ರಾಜೀನಾಮೆ ನೀಡಿದ್ದರಿಂದ ಸದನದ ಬಲ 208ಕ್ಕೆ ಕುಸಿದಿದೆ. ಒಟ್ಟು 79 ಕಾಂಗ್ರೆಸ್ ಶಾಸಕರ ಪೈಕಿ 13 ಮಂದಿ ರಾಜೀನಾಮೆ ನೀಡಿದ್ದು, ಸ್ಪೀಕರ್ ಸೇರಿ 66 ಸದಸ್ಯರ ಬಲ ಹೊಂದಿದ್ದಾರೆ. ಮೂರು ಮಂದಿ ಜೆಡಿಎಸ್ ಶಾಸಕರ ರಾಜೀನಾಮೆಯಿಂದ ದಳ ಶಾಸಕರ ಸಂಖ್ಯೆ 34ಕ್ಕೆ ಕುಸಿದಿದೆ. ಇಬ್ಬರು ಪಕ್ಷೇತರರ ಬೆಂಬಲದಿಂದ ಬಿಜೆಪಿ ಬಲ 107ಕ್ಕೆ ಏರಿಕೆಯಾಗಿದ್ದರೆ ಬಿಎಸ್‍ಪಿ ಶಾಸಕ ಎನ್ ಮಹೇಶ್ ವಿಧಾನಸಭೆಯಲ್ಲಿ ಪ್ರತ್ಯೇಕ ಸೀಟ್ ಕೇಳಿದ್ದಾರೆ. 208 ಶಾಸಕರು ಇರುವ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 105 ಶಾಸಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ದೋಸ್ತಿಗಳಿಗೆ 99 ಶಾಸಕರ ಬೆಂಬಲವಿದೆ.

Leave a Reply

Your email address will not be published. Required fields are marked *