Connect with us

Latest

ಬಾಬಾ ಭಕ್ತರಿಂದ ಉಂಟಾದ ನಷ್ಟ ಭರಿಸಲು ಡೇರಾ ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ- ಎಷ್ಟಿದೆ ಗೊತ್ತಾ ಈ ಬಾಬಾ ಆಸ್ತಿ?

Published

on

ನವದೆಹಲಿ: ಸ್ವಯಂಘೋಷಿತ ದೇವಮಾನವ ಗುರುಮೀತ್ ರಾಮ್ ರಹೀಮ್ ಮೇಲಿನ ರೇಪ್ ಆರೋಪ ಸಾಬೀತಾಗುತ್ತಿದ್ದಂತೆ ಶುಕ್ರವಾರದಂದು ಬಾಬಾ ಭಕ್ತರು ಸಾರ್ವಜನಿಕ ಆಸ್ತಿ ಪಾಸ್ತಿಗೆ ಭಾರೀ ಹಾನಿ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಂಜಾಬ್ ಹರಿಯಾಣ ಹೈಕೋರ್ಟ್, ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾಗಿರುವ ನಷ್ಟವನ್ನ ಭರಿಸಲು ಡೇರಾ ಸಚ್ಚಾ ಸೌಧದ ಸಂಪೂರ್ಣ ಆಸ್ತಿ ಮುಟ್ಟುಗೋಲಿಗೆ  ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಹೈಕೋರ್ಟ್‍ನ ಪೂರ್ಣ ಪೀಠ ವಿಚಾರಣೆ ನಡೆಸಲಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನ ದಾಖಲಿಸಿಕೊಳ್ಳುವಂತೆ ಈಗಾಗಲೇ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದು ವರದಿ ಸಲ್ಲಿಕೆಯಾಗಲಿದೆ.

ಡೇರಾ ಸಚ್ಚಾ ಸೌಧದ 15 ಆಶ್ರಮಗಳು ಪಂಜಾಬ್, ಹರಿಯಾಣ ಹಾಗೂ ರಾಜಸ್ಥಾನದಲ್ಲಿವೆ. ಈ ಪಂಥದ ಮೂಲ ಸ್ಥಳವಾದ ಸಿರ್ಸಾದಲ್ಲಿ 6 ಆಶ್ರಮಗಳಿವೆ. ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಡೇರಾ ಸಚ್ಚಾ ಸೌಧ ತನ್ನ ವೆಬ್‍ಸೈಟ್‍ನಿಂದ ಆಶ್ರಮಗಳ ಪಟ್ಟಿಯನ್ನೇ ತೆಗೆದುಹಾಕಿದೆ ಎಂದು ವರದಿಯಾಗಿದೆ.

ಬಾಬಾ ಮತ್ತು ಡೇರಾ ಸಚ್ಚಾ ಸೌಧದ ಆಸ್ತಿ ಪ್ರಮಾಣ ಎಷ್ಟು?: ಕೇವಲ ಒಬ್ಬ ವ್ಯಕ್ತಿ. ಹೆಚ್ಚು ಕಡಿಮೆ ಇಡೀ ಉತ್ತರಭಾರತ ಜ್ವಾಲಾಗ್ನಿಯಲ್ಲಿ ಬೇಯಲು ಕಾರಣನಾಗಿದ್ದಾನೆ. ಈತನ ದಿನದ ಗಳಿಕೆ 17 ಲಕ್ಷ. ಅಂದ್ರೆ ವರ್ಷಕ್ಕೆ 60 ಕೋಟಿಗೂ ಹೆಚ್ಚು. ಇದು ಕೋಟಿ ಕೋಟಿ ಭಕ್ತರಿಂದ ಬರುವ ಕಾಣಿಕೆ ಮಾತ್ರ.

ರಾಕ್ ಸ್ಟಾರ್, ಸ್ಟೈಲಿಷ್, ಸಕಲ ಕಲಾವಲ್ಲಭ ಬಾಬಾ ಮೊದಲೇ ಉದ್ಯಮಿ. 2003ರಲ್ಲಿ ಎಂಎಸ್‍ಜಿ ಬ್ರಾಂಡ್‍ನ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದ್ವು. ಇದೀಗ ಎಂಎಸ್‍ಜಿ ಉತ್ಪನ್ನಗಳ ಸಂಖ್ಯೆ 150ಕ್ಕೂ ಹೆಚ್ಚು. ಉತ್ತರದ ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಔಟ್‍ಲೆಟ್‍ಗಳಿವೆ. ಇಷ್ಟೇ ಅಲ್ಲ, ಸಾವಿರಾರು ಕೋಟಿ ಮೌಲ್ಯದ ಸ್ಥಿರಾಸ್ತಿ, ಚರಾಸ್ಥಿಗಳು ಡೇರಾ ಸಚ್ಚಾ ಸೌಧದ ಹೆಸರಲ್ಲಿವೆ. ಇವುಗಳಿಂದ ಬರುವ ಆದಾಯವೇ ನೂರಾರು ಕೋಟಿ ದಾಟುತ್ತದೆ.

ಕೇವಲ 10ನೇ ಕ್ಲಾಸ್ ಓದಿದ ಈ ಬಾಬಾ 11 ಶಾಲೆ, 2 ಕಾಲೇಜು ನಡೆಸ್ತಾನೆ. ಈತನದ್ದೇ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಇದೆ. ವಿಶೇಷ ಅಂದ್ರೆ ಇಲ್ಲೆಲ್ಲಾ ಕೋಟಿ ಕೋಟಿ ಡೇರಾ ಪಂಥಿಯರಿಗೆ ಫ್ರೀ ಟ್ರೀಟ್‍ಮೆಂಟ್. ಫ್ರೀ ಶಿಕ್ಷಣ ಇದೆ. ಜೊತೆಗೆ ಅಗ್ಗದ ಬೆಲೆಯಲ್ಲಿ ಪಡಿತರ ಕೂಡ ಪೂರೈಕೆ ಮಾಡಲಾಗುತ್ತೆ. ಈ ಬಾಬಾ 2012-13ನೇ ಸಾಲಿನಲ್ಲಿ ಕಟ್ಟಿದ ಆದಾಯ ತೆರಿಗೆ ಮೊತ್ತ ಬರೋಬ್ಬರಿ 29 ಕೋಟಿ ಅಂದ್ರೆ ನೀವು ನಂಬಲೇಬೇಕು.

ಒಟ್ನಲ್ಲಿ ಹತ್ತು ಹಲವು ಆರೋಪ, ವಿವಾದಗಳ ನಡುವೆಯೂ ಜನಪ್ರಿಯತೆ ಗಳಿಸಿದ್ದ ಡೇರಾ ಸಚ್ಛಾ ಸೌಧದ ಪೀಠಾಧಿಪತಿ ಈಗ ಅಪರಾಧಿ. ಆಗಸ್ಟ್ 20 ಅಂದ್ರೆ ಸೋಮವಾರದಂದು ಬಾಬಾಗೆ ಶಿಕ್ಷೆಯ ಪ್ರಮಾಣ ಪ್ರಕಟವಗಲಿದೆ.

ಬಾಬಾನನ್ನ ಜೈಲಿಗೆ ಕಳುಹಿಸಿದ್ದ ರೇಪ್ ಕೇಸ್‍ನ ಡಿಟೇಲ್ಸ್ ಹೀಗಿದೆ.

* 1999ರಿಂದ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ನಿರಂತರ ಅತ್ಯಾಚಾರ
* ಹರ್ಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲೇ ಸಾಧ್ವಿಗಳ ಮೇಲೆ ಅತ್ಯಾಚಾರ
* 2002ರಲ್ಲಿ ಪ್ರಧಾನಿ ವಾಜಪೇಯಿಗೆ ಸಾಧ್ವಿಯೊಬ್ಬರಿಂದ ಅನಾಮಧೇಯ ಪತ್ರ
* ವಾಜಪೇಯಿಗೆ ಪತ್ರ ರವಾನಿಸಿದ್ದ ಆರೋಪದಲ್ಲಿ ರಂಜಿತ್ ಎಂಬಾತನಿಗೆ ಗುಂಡಿಟ್ಟ ಬಾಬಾ ಭಕ್ತರು
* 2002 ಚಂಡೀಗಡ ಹೈಕೋರ್ಟ್‍ನಿಂದ ಸುಮೋಟೋ ಕೇಸ್ ದಾಖಲು
* ಹೈಕೋರ್ಟ್‍ಗೆ ತನಿಖಾ ವರದಿ ಸಲ್ಲಿಸಿದ ಸಿರ್ಸಾ ಸೆಷನ್ ಜಡ್ಜ್
* 2002ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿದ ಚಂಡೀಗಡ ಹೈಕೋರ್ಟ್
* ಪಂಚಕುಲಾ ಸಿಬಿಐ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ
* 2006 – ಸಿಬಿಐ ಮುಂದೆ ಹೇಳಿಕೆ ದಾಖಲಿಸಿದ್ದ ಸಂತ್ರಸ್ತೆ ಸಾಧ್ವಿ
( ಒಂದು ದಿನ ರಾತ್ರಿ ಬಾಬಾ ತನ್ನ ಚೇಂಬರ್‍ಗೆ ಕರೆದ್ರು. ನಾನು ಒಳ ಹೋದಂತೆ ಅಟೋಮ್ಯಾಟಿಕ್ ಬಾಗಿಲು ಬಂದ್ ಆಯ್ತು. ನನಗೆ ಎಲ್‍ಸಿಡಿಯಲ್ಲಿ ಅಶ್ಲೀಲ ವೀಡಿಯೋ ತೋರಿಸಿದ್ರು. ಅತ್ಯಾಚಾರ ಮಾಡಿದ್ರು. ಪಕ್ಕದಲ್ಲಿ ಗನ್ ಇತ್ತು. 3 ವರ್ಷಗಳವರೆಗೆ ನಿರಂತರವಾಗಿ ಅತ್ಯಾಚಾರ, 30-40ರಷ್ಟು ಮಹಿಳಾ ಭಕ್ತರಿಗೂ ಇದೇ ರೀತಿ ಪೀಡಿಸಿದ್ದ ಆರೋಪ. )
* ಸಿಬಿಐನಿಂದ 18 ಸಾಧ್ವಿಯರ ವಿಚಾರಣೆ
* 2007 – ಸಿಬಿಐನಿಂದ ಬಾಬಾ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ (ಬಾಬಾ ಚೇಂಬರ್‍ಗೆ ಆಯ್ದ ಕೆಲವರಿಗೆ ಮಾತ್ರ ಪ್ರವೇಶ)
* 2007 – ಬಾಬಾಗೆ ನಿರೀಕ್ಷಣಾ ಜಾಮೀನು ಕೊಟ್ಟ ಹೈಕೋರ್ಟ್
* 2008 – ಸೆಕ್ಷನ್ 376ರ ಅಡಿ ಬಾಬಾ ರಾಮ್ ರಹೀಂ ವಿರುದ್ಧ ಸಿಬಿಐ ಕೇಸ್
* 2009 & 2010 – ಸಿಬಿಐ ವಿಚಾರಣೆಯಲ್ಲಿ ಅತ್ಯಾಚಾರದ ಬಗ್ಗೆ ಇಬ್ಬರಿಂದ ಹೇಳಿಕೆ
* 2017, ಆಗಸ್ಟ್ 1 – ತೀರ್ಪು ಕಾಯ್ದಿರಿಸಿದ ಪಂಚಕುಲಾ ಸಿಬಿಐ ಕೋರ್ಟ್
* 2017 ಆಗಸ್ಟ್ 25 – ರಾಮ್ ರಹೀಂ ದೋಷಿ, ಆಗಸ್ಟ್ 28ಕ್ಕೆ ಶಿಕ್ಷೆ ಪ್ರಮಾಣ