Connect with us

Latest

ಪತ್ರಕರ್ತನ ಕೊಲೆ ಪ್ರಕರಣ – ರಾಮ್ ರಹೀಂಗೆ ಜೀವಾವಧಿ ಶಿಕ್ಷೆ

Published

on

ಪಂಚಕುಲ: ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.

ಈಗಾಗಲೇ ಹರಿಯಾಣದ ಡೇರಾ ಸಚ್ಛಾಸೌದಾದ ಸಾಧ್ವಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಂಗೆ ಪತ್ರಕರ್ತ ರಾಮಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿದೆ.

ಸ್ವಾಧ್ವಿಗಳ ಮೇಲೆ ಅತ್ಯಾಚಾರ ನಡೆಸಿದ ಕುರಿತಂತೆ ಪತ್ರಕರ್ತ ರಾಮ್ ಚಂದರ್ ಸರಣಿ ಲೇಖನ ಬರೆದಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ರಾಮ್ ರಹೀಂ, 2002ರಲ್ಲಿ ಸಿರ್ಸಾ ಎಂಬಲ್ಲಿ ರಾಮ್ ಚಂದರ್ ಅವರನ್ನು ಕೊಲೆ ಮಾಡಿಸಿದ್ದ. ಈ ಪ್ರಕರಣ ಸಂಬಂಧ ಬಾಬಾ ಜೊತೆಗೆ ಇತರೆ ಮೂವರಿಗೂ ಜೀವಾವಧಿ ಶಿಕ್ಷೆ ಜೊತೆಗೆ 50 ಸಾವಿರ ದಂಡ ವಿಧಿಸಲಾಗಿದೆ.

ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂಗೆ 20 ವರ್ಷ ಜೈಲು ಶಿಕ್ಷೆ ಘೋಷಣೆ ಆಗುತ್ತಿದಂತೆ 2017ರಲ್ಲಿ ಪಂಚಕುಲಾ ಹೊತ್ತಿ ಉರಿದಿತ್ತು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಬಾಬಾ ಬೆಂಬಲಿಗರು ಅಡಗಿಸಿಟ್ಟದ್ದ ಅಪಾರ ಪ್ರಮಾಣದ ಬಡಿಗೆ, ಕಬ್ಬಿಣದ ಸರಳು, ಚೈನು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇಂದು ಕೂಡ ಪಂಚಕುಲ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು. ಕಾನೂನು ವಿರೋಧಿ ಚಟುವಟಿಕೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv