Connect with us

Latest

ಕೆಂಪುಕೋಟೆಯಲ್ಲಿ ದಾಂಧಲೆ – ದೀಪು ಸಿಧು ರೈತ ಹೋರಾಟಗಾರನೇ? ಬಿಜೆಪಿಯವನೇ? ಖಲಿಸ್ತಾನ್‌ ನಾಯಕನೇ?

Published

on

– ದಾಂಧಲೆ ಎಬ್ಬಿಸಿದ ಬಳಿಕ ಬಿಜೆಪಿ ಏಜೆಂಟ್‌ ಹೇಗೆ ಆಗ್ತಾನೆ?
– ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
– ದೀಪು ಸಿಧುವಿನಿಂದ  ಅಂತರ ಕಾಯ್ದುಕೊಂಡ ರೈತ ಸಂಘಟನೆ

ನವದೆಹಲಿ: ದೆಹಲಿ ಕೆಂಪುಕೋಟೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಪಂಜಾಬ್‌ ನಟ ದೀಪು ಸಿಧು ಬಿಜೆಪಿ ಏಜೆಂಟಾ? ರೈತ ಹೋರಾಟಗಾರನಾ? ಅಥವಾ ಪ್ರತ್ಯೇಕ ಪಂಜಾಬ್‌ಗಾಗಿ ಆಗ್ರಹಿಸುತ್ತಿರುವ ಖಲಿಸ್ತಾನ್‌ ನಾಯಕನೇ ಎಂಬ ವಿಚಾರದ ಬಗ್ಗೆ ಈಗ ಚರ್ಚೆ ಜೋರಾಗಿ ನಡೆಯುತ್ತಿದೆ.

ದೀಪು ಸಿಂಗ್‌  ಈ ಹಿಂದೆ ನೀಡಿದ ಹೇಳಿಕೆ ಮತ್ತು ರಾಜಕೀಯ ನಾಯಕರ ಒಡನಾಟದಿಂದ ಈ ಚರ್ಚೆ ಈಗ ಆರಂಭವಾಗಿದೆ. ನಿನ್ನೆ ಕೆಂಪುಕೋಟೆಗೆ ನುಗ್ಗಿದ್ದ ದೀಪು ಸಿಧು ಅಲ್ಲಿಂದಲೇ ಫೇಸ್‌ಬುಕ್‌ ಲೈವ್‌ ಮಾಡಿ ನಾವು ನಿಶಾನ್‌ ಧ್ವಜವನ್ನು ಹಾರಿಸಿದ್ದೇವೆ. ನಾವು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಿಲ್ಲ. ಕಿಸಾನ್‌ ಧ್ವಜ ಮತ್ತು ನಿಶಾನ್‌ ಸಾಹಿಬ್‌ ಧ್ವಜವನ್ನು ಹಾರಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಇದೆ. ಇಂದು ನಾವು ಈ ಹಕ್ಕನ್ನು ಚಲಾಯಿಸಿದ್ದೇವೆ ಎಂದು ಹೇಳಿದ್ದ.

ರೈತರ ಪ್ರತಿಭಟನೆಯ ಪರವಾಗಿ ಹೋರಾಟ ನಡೆಸುತ್ತಿರುವ ವ್ಯಕ್ತಿಗಳು ಈತ ಬಿಜೆಪಿ ಏಜೆಂಟ್‌. ಈತ ಬಿಜೆಪಿ-ಆರ್‌ಎಸ್‌ಎಸ್‌ ಅಜೆಂಡಾದಡಿ ಹೋರಾಟ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಈ ಮಧ್ಯೆ ದೀಪು ಸಿಧು ಬಿಜೆಪಿ ನಾಯಕರ ಜೊತೆಗೆ ಇರುವ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೀಪು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ. ಗುರುದಾಸ್‍ಪುರ ಸಂಸದ ಸನ್ನಿ ಡಿಯೋಲ್ ಪರ ಪ್ರಚಾರದ ಉಸ್ತುವಾರಿ ವಹಿಸಿದ್ದ. ಮೋದಿ, ಶಾ, ಬಿಜೆಪಿ ಸಂಸದೆ ಹೇಮಮಾಲಿನಿ ಜೊತೆಗೆ ಇರುವ ಸಿಧು ಫೋಟೋ ವೈರಲ್ ಆಗಿದೆ.

ಇತ್ತ ಬಿಜೆಪಿ ಪರ ಬೆಂಬಲಿಗರು ಈತ ಬಿಜೆಪಿಯ ಸದಸ್ಯನಲ್ಲ. ಈತ ರೈತ ನಾಯಕನಾಗಿದ್ದು ಈತನೇ ಮಾಧ್ಯಮಗಳ ಜೊತೆ ಮಾತನಾಡಿದ್ದಾನೆ ಎಂದು ಹೇಳಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ನವೆಂಬರ್‌ 27 ರಂದು ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸೇವಾದಳದ ಅಧಿಕೃತ ಖಾತೆ ದೀಪು ಸಿಂಗ್‌ ಮಾತನಾಡುತ್ತಿರುವ ವಿಡಿಯೋವನ್ನು ಹಾಕಿ ರೈತರ ಧ್ವನಿ ಎಂದು ಹೇಳಿತ್ತು. ಈಗ ಈ ವಿಡಿಯೋ ವೈರಲ್‌ ಆಗಿದ್ದು, ಬಿಜೆಪಿ ಅಭಿಮಾನಿಗಳು ಅಂದು ಪ್ರತಿಭಟನೆ ನಡೆಸುತ್ತಿದ್ದಾಗ ದೀಪು ಸಿಂಗ್‌ ರೈತ ನಾಯಕನಾಗಿದ್ದ. ಈತ ದಾಂಧಲೆ ಎಬ್ಬಿಸಿದ ಬಳಿಕ ಬಿಜೆಪಿ ಏಜೆಂಟ್‌ ಹೇಗೆ ಆಗುತ್ತಾನೆ ಎಂದು ಪ್ರಶ್ನಿಸಿ ಕಾಂಗ್ರೆಸ್‌ ಮತ್ತು ರೈತ ಸಂಘಟನೆಗಳನ್ನು ಪ್ರಶ್ನಿಸುತ್ತಿದ್ದಾರೆ.

ವಿಶೇಷ ಏನೆಂದರೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕಳೆದ ವಾರ ದೀಪು ಸಿಂಗ್‌ಗೆ ಸಮನ್ಸ್‌ ಜಾರಿ ಮಾಡಿತ್ತು. ಸಿಖ್‌ ಫಾರ್‌ ಜಸ್ಟಿಸ್‌ ಪ್ರಕರಣದಲ್ಲಿ ಈತ ಸೇರಿದಂತೆ 40 ಮಂದಿಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ಹಾಜರಾಗುಂತೆ ಸೂಚಿಸಿತ್ತು. ಎನ್‌ಐಎ ಸಮನ್ಸ್‌ ಜಾರಿ ಮಾಡಿದಾಗ ಈತನ ಪರವಾಗಿ ಹಲವು ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು.  ಸಮನ್ಸ್‌ ಜಾರಿಯಾದ ಸಂದರ್ಭದಲ್ಲಿ ಎನ್‌‌ಐಎ ಬಿಜೆಪಿಯಂತೆ ಕೆಲಸ ಮಾಡುತ್ತಿದೆ ಎಂದು  ದೀಪು ಸಿಂಗ್‌  ಆ‌ರೋಪಿಸಿ ಟೀಕಿಸಿದ್ದ.

ಪ್ರತ್ಯೇಕ ಖಲಿಸ್ತಾನಕ್ಕಾಗಿ ವಿದೇಶದಿಂದ ಹಣ ಪಡೆದು ಸಿಖ್‌ ಫಾರ್‌ ಜಸ್ಟಿಸ್‌ ಭಾರತದಲ್ಲಿ ದೇಶದ್ರೋಹಿ ಕೆಲಸ ಮಾಡುತ್ತಿದೆ ಎಂದು ಎಂಬ ಆರೋಪ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣ ದಾಖಲಿಸಿ ದೀಪು ಸಿಂಗ್‌ಗೆ ಸಮನ್ಸ್‌ ಜಾರಿ ಮಾಡಿತ್ತು.

ಕೆಂಪುಕೋಟೆ ಪ್ರಕರಣದಿಂದ ರೈತ ಹೋರಾಟಕ್ಕೆ ಭಾರೀ ಹಿನ್ನಡೆಯಾಗಿದೆ. ಆದರೆ ಈಗ ರೈತ ಸಂಘಟನೆಗಳು ದೀಪು ಸಿಧುವಿನಿಂದ ಅಂತರ  ಕಾಯ್ದುಕೊಂಡು ನಮಗೂ ಈ ದಾಂಧಲೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿವೆ.

Click to comment

Leave a Reply

Your email address will not be published. Required fields are marked *