Connect with us

Latest

ಗ್ರೇಟಾ ಥನ್‌ಬರ್ಗ್‌ ಟೂಲ್‌ ಕಿಟ್‌ ದಾಖಲೆ ಕೇಳಿ ಗೂಗಲ್‌ಗೆ ಪೊಲೀಸರಿಂದ ಪತ್ರ

Published

on

– ರಿಹಾನಾ ನೆರವಿಗೆ ಧಾವಿಸಿದ ರಮ್ಯಾ
– ಮತ್ತೆ ರೈತರ ಪರ ಮೀಯಾ ಖಲೀಫಾ ಟ್ವೀಟ್‌

ನವದೆಹಲಿ: ರೈತರ ಹೋರಾಟ ಬೆಂಬಲಿಸಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ನೀಡುತ್ತಿರುವ ಪ್ರತಿಕ್ರಿಯೆಗಳ ಹಿಂದೆ ಖಲಿಸ್ತಾನ್ ಪ್ರತ್ಯೇಕವಾದಿಗಳ ಪಾತ್ರವಿರುವ ಬಗ್ಗೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಖಲಿಸ್ತಾನ್ ಚಳವಳಿಯಲ್ಲಿರುವ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಸ್ಥೆ ಗ್ರೆಟಾ ಥನ್‍ಬರ್ಗ್‍ಗೆ ಯಾವತ್ತು ಏನು ಮಾಡಬೇಕು ಎಂಬ ಗೂಗಲ್‌ ಡಾಕ್ಯುಮೆಂಟ್‌ ಟೂಲ್ ಕಿಟ್ ಕಳಿಸಿತ್ತು. ಇದನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿ, ನಂತರ ಡಿಲೀಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಟೂಲ್‍ಕಿಟ್ ಮಾಹಿತಿಯನ್ನು ಕೋರಿ ದೆಹಲಿ ಪೊಲೀಸರು ಗೂಗಲ್‍ಗೆ ಪತ್ರ ಬರೆದಿದ್ದಾರೆ.

ರೈತರ ವಿಚಾರವಾಗಿ ಟ್ವೀಟ್ ಮಾಡಲು ರಿಹಾನಾಗೆ ಖಲಿಸ್ತಾನಿಗಳು 18 ಕೋಟಿ ಸಂದಾಯ ಮಾಡಿದ್ದಾರೆ ಎಂಬ ಸುದ್ದಿ ಹರಡಿದ್ದು, ಈ ಕುರಿತ ಟ್ವೀಟನ್ನು ನಟಿ ಕಂಗನಾ ಶೇರ್ ಮಾಡಿದ್ದಾರೆ.

ಮಾಜಿ ನೀಲಿ ತಾರೆ ಮೀಯಾ ಖಲೀಫಾ ಮತ್ತೊಮ್ಮೆ ಟ್ವೀಟ್ ಮಾಡಿದ್ದು, ನಾನು ರೈತ ಹೋರಾಟದ ಪರವೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮೊನ್ನೆಯ ಟ್ವೀಟ್‍ಗೆ ಕೆಲವರು ಮೀಯಾಗೆ ಪ್ರಜ್ಞೆ ಬಂದಿದೆ ಎಂದು ಕಾಲೆಳೆದಿದ್ದರು. ಇದನ್ನು ಹಂಚಿಕೊಂಡಿರುವ ಮೀಯಾ, ಹೌದು ನಾನು ಪ್ರಜ್ಞೆಗೆ ಮರಳಿದ್ದೇನೆ. ಅಗತ್ಯವಿಲ್ಲದಿದ್ದರೂ ನಿಮ್ಮ ಕಾಳಜಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಪಾಪ್ ಗಾಯಕಿ ರಿಹಾನಾ, ಗ್ರೆಟಾ ಥನ್‍ಬರ್ಗ್ ಬೆಂಬಲಕ್ಕೆ ನಟಿ ರಮ್ಯಾ ಧಾವಿಸಿದ್ದಾರೆ. ಬಾಲಿವುಡ್‍ಗಿಂತ ಇವರ ಬೆನ್ನುಮೂಳೆಯೇ ಗಟ್ಟಿಯಾಗಿದೆ ಎಂದು ಟ್ವೀಟಿಸಿದ್ದಾರೆ. ಕೆನಡಾ ಪ್ರಜೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಬಹುದಾದರೇ ರಿಹಾನಾ ಏಕೆ ಸ್ಪಂದಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ರಿಹಾನಾ ಮಾತನ್ನು ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೇ ಬೆಂಬಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ರೈತ ಹೋರಾಟವನ್ನು ಬೆಂಬಲಿಸಿದ ಸೆಲೆಬ್ರಿಟಿಗಳ ಕುರಿತ ಪ್ರಶ್ನೆಗೆ, ಯಾರು ಆ ವಿದೇಶಿ ಪ್ರಮುಖರು ಎಂದು ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ. ರಿಹಾನಾ, ಗ್ರೆಟಾ ಹೆಸರು ಹೇಳಿದಾಗ ಅವರ ಬಗ್ಗೆ ತಮಗೇನು ಗೊತ್ತಿಲ್ಲ. ಆದರೆ ಅವರು ಬೆಂಬಲಿಸಿದ್ದರಿಂದ ಉಂಟಾಗಿರುವ ಸಮಸ್ಯೆಯಾದರೂ ಏನು ಎಂದು ಕೇಳಿದ್ದಾರೆ.

Click to comment

Leave a Reply

Your email address will not be published. Required fields are marked *