Connect with us

Latest

ಪಕ್ಷದ ಕಚೇರಿ ಮುಂದೆಯೇ ಪತ್ನಿಗೆ ಥಳಿಸಿದ ಬಿಜೆಪಿ ಮುಖಂಡ

Published

on

ನವದೆಹಲಿ: ಪಕ್ಷದ ಕಚೇರಿ ಮುಂದೆಯೇ ಬಿಜೆಪಿ ಮುಖಂಡ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಬಿಜೆಪಿಯ ಮೆಹ್ರೌಲಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ತಮ್ಮ ಪತ್ನಿ, ದಕ್ಷಿಣ ದೆಹಲಿಯ ಮಾಜಿ ಮೇಯರ್ ಸರಿತಾ ಚೌಧರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಆಜಾದ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಚುನಾವಣೆ ಸಿದ್ಧತೆ ವಿಚಾರವಾಗಿ ಗುರುವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಮೆಹ್ರೌಲಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ಕೂಡ ಸಭೆಗೆ ಹಾಜರಾಗಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಪತ್ನಿಯನ್ನು ನೋಡಿದ ಆಜಾದ್ ಸಿಂಗ್ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಜಾವೆಡೆಕರ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಬಿಜೆಪಿ ಕಚೇರಿಯಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು, ಮಹಿಳೆಯ ಮೇಲೆ ನಡೆದ ಹಲ್ಲೆಯ ವಿಚಾರವಾಗಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ತನಿಖಾ ಸಮಿತಿಯನ್ನು ರಚಿಸಿದ್ದೇವೆ. ಜೊತೆಗೆ ಆಜಾದ್ ಸಿಂಗ್ ಅವರನ್ನು ಮೆಹ್ರೌಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ದೆಹಲಿ ಮಾಜಿ ಮೇಯರ್ ಸರಿತಾ ಹಾಗೂ ಪತಿ ಆಜಾದ್ ಸಿಂಗ್ ಮಧ್ಯೆ ಈ ಹಿಂದೆಯೂ ಜಗಳವಾಗಿತ್ತು. ಕೌಟುಂಬಿಕ ಕಲಹದಿಂದಾಗಿ ದಂಪತಿಯು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಈ ಘಟನೆಯ ಕುರಿತು ಇದುವರೆಗೂ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಪೋಲಿಸ್ ಅಧಿಕಾರಿಯೊಬ್ಬರು, ಘಟನೆಯಲ್ಲಿ ಭಾಗಿಯಾದ ಯಾರಿಂದಲೂ ನಮಗೆ ಯಾವುದೇ ದೂರು ಬಂದಿಲ್ಲ. ನಮಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದು ಹೇಳಿದ್ದಾರೆ.

ಸಭೆಗೆ ಆಗಮಿಸಿದ್ದ ಪತ್ನಿ ಸರಿತಾ ಚೌಧರಿ ಅವರು ಮೊದಲು ನನ್ನನ್ನು ನಿಂದಿಸಿದರು. ಅಷ್ಟೇ ಅಲ್ಲ ಹಲ್ಲೆಗೆ ಯತ್ನಿಸಿದರು. ತಕ್ಷಣವೇ ರಕ್ಷಣೆಗಾಗಿ ಅವರನ್ನು ತಳ್ಳಿದ್ದೇನೆ ಎಂದು ಆಜಾದ್ ಸಿಂಗ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.