Tuesday, 18th February 2020

ದುಬಾರಿ ಬೆಲೆಯ ಗೌನ್ ಧರಿಸಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಿಂಚಿದ ದೀಪಿಕಾ

ದಾವೋಸ್: ಬಾಲಿವುಡ್‍ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ದುಬಾರಿ ಗೌನ್‍ ಧರಿಸಿ ದೀಪಿಕಾ ಮಿಂಚಿದ್ದಾರೆ.

ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ನೀಲಿ ಬಣ್ಣದ ಗೌನ್‍ನಲ್ಲಿ ದೀಪಿಕಾ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ. ವೇದಿಕೆ ಮೇಲೆ ನೀಲಿ ಗೌನ್‍ನಲ್ಲಿ ದೀಪಿಕಾ ಕ್ರಿಸ್ಟಲ್ ಅವಾರ್ಡ್ ಪಡೆಯುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ದೀಪಿಕಾ ಅವರ ದೇಹದ ಶೇಪ್‍ಗೆ ತಕ್ಕಂತೆ ಈ ಗೌನ್ ಡಿಸೈನ್ ಮಾಡಲಾಗಿತ್ತು. ಈ ದುಬಾರಿ ಗೌನ್‍ಗೆ ಚೌಕ ಆಕಾರದ ನೆಕ್‍ಲೈನ್, ಪ್ಯಾಡೆಡ್ ಶೋಲ್ಡರ್, ಕೇಪ್ ಸ್ಲೀವ್ಸ್ ಫಿನಿಷಿಂಗ್ ನೀಡಲಾಗಿದೆ. ಈ ಗೌನ್ ಧರಿಸಿದ್ದ ದೀಪಿಕಾ ಅದಕ್ಕೆ ಮ್ಯಾಚಿಂಗ್ ಡೈಮಂಡ್ ಮತ್ತು ಸಫೈರ್ ಇಯರ್‍ರಿಂಗ್ ಹಾಕಿದ್ದರು. ನೋಡಲು ಸಿಂಪಲ್ ಆಗಿ ಕಾಣಿಸಿದರೂ ದೀಪಿಕಾ ಅವರ ಗೌನ್ ಲುಕ್ ಎಲ್ಲರ ಗಮನ ಸೆಳೆದಿದೆ. ವೇದಿಕೆ ಮೇಲೆ ಗೌನ್‍ನಲ್ಲಿ ಕ್ರಿಸ್ಟಲ್ ಅರ್ವಾಡ್ ಜೊತೆ ದೀಪಿಕಾ ಮಿಂಚಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಕ್ಕಾಗಿ ದೀಪಿಕಾ ಅವರಿಗೆ ಕ್ರಿಸ್ಟಲ್ ಅವಾರ್ಡ್ 2020 ನೀಡಿ ಗೌರವಿಸಲಾಗಿದೆ. ಸ್ಟಾರ್ ನಟಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ದೀಪಿಕಾ ಮಾಡುತ್ತಾ ಬಂದಿದ್ದಾರೆ. ಖಿನ್ನತೆಗೆ ಒಳಗಾದರಿಗೆ ಸಹಾಯ ಮಾಡುವ ಉದ್ದೇಶದಿಂದ 2015ರಲ್ಲಿ `ಲೀವ್ ಲವ್ ಲಾಫ್’ ಸಂಸ್ಥೆಯನ್ನು ದೀಪಿಕಾ ಸ್ಥಾಪಿಸಿದ್ದಾರೆ. ಈ ಮೂಲಕ ಖಿನ್ನತೆಗೆ ಒಳಗಾದವರು ಆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.

ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ದೀಪಿಕಾ, ತಾವು ಖಿನ್ನತೆಗೆ ಒಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಪ್ರಾರಂಭವಾದ ಖಿನ್ನತೆ ಮತ್ತು ಆತಂಕದಿಂದ ಸಾಕಷ್ಟು ಬಾರಿ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೆ. ಆದರೆ ನನ್ನ ತಾಯಿ ನನ್ನನ್ನು ಖಿನ್ನತೆಯಿಂದ ಹೊರಗೆ ಕರೆದುಕೊಂಡು ಬಂದರು. ಖಿನ್ನತೆ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲಾಗುತ್ತೆ. ನನ್ನ ಅನುಭವದ ಪ್ರಕಾರ ಸ್ವೀಕಾರವು ಚೇತರಿಕೆಯ ಮೊದಲ ಹೆಜ್ಜೆಯಾಗಿದೆ ಎಂದು ಭಾಷಣ ಮಾಡಿದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *