Connect with us

Corona

ಕೊರೊನಾ ಮಹಾಸ್ಫೋಟ- ಮುಂಬೈನಲ್ಲಿ ಮತ್ತೆ ಸೆಕ್ಷನ್ 144 ಜಾರಿ

Published

on

– ಸೆ.30ರ ವರೆಗೂ ನಿಷೇಧಾಜ್ಞೆ ಅನ್ವಯ

ಮುಂಬೈ: ಮಹಾನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಪೊಲೀಸರು ನಗರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿ ಮಾಡಿದ್ದು, ಇಂದು ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿಗೆ ಬರಲಿದೆ.

ಸೆ.30ರ ವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶ, ಧಾರ್ಮಿಕ ಸ್ಥಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ 2,97,506 ಕೊರೊನಾ ಪಾಸಿಟಿವ್ ಸಕ್ರಿಯ ಪ್ರಕರಣಗಳಿವೆ.

ಮುಂಬೈ ಪೊಲೀಸ್ ಉಪ ಆಯುಕ್ತರು ಆದೇಶವನ್ನು ಜಾರಿ ಮಾಡಿದ್ದು, ಮಹಾ ನಗರ ಪಾಲಿಕೆ ಘೋಷಣೆ ಮಾಡಿರುವ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸಂಚಾರವನ್ನು ನಿಷೇಧ ಮಾಡಲಾಗಿದೆ. ಸೆಕ್ಷನ್ 144 ಜಾರಿ ಆಗಿರುವುದರಿಂದ ಹೊಸ ಲಾಕ್‍ಡೌನ್ ನಿಯಮಗಳು ಜಾರಿ ಆಗುವುದಿಲ್ಲ. ವಾಡಿಕೆಯಂತೆ ಇದನ್ನು ಜಾರಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶದಂತೆ ಅನ್‍ಲಾಕ್ 4.0 ಮಾರ್ಗಸೂಚಿಗಳು ಮುಂದುವರಿಯುತ್ತಿವೆ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಆದರೆ ಈಗಾಗಲೇ ಕಂಟೈನ್ಮೆಂಟ್ ಜಾರಿಯಲ್ಲಿರುವ ನಿರ್ಬಂಧಗಳು ಮುಂದುವರಿಯಲಿದ್ದು, ಅಗತ್ಯ ಚಟುವಟಿಕೆಗಳು, ಅಗತ್ಯ ಆಹಾರಗಳ ಪೂರೈಕೆ ಮತ್ತು ವೈದ್ಯಕೀಯ ಸೇವೆಗಳು ಲಭ್ಯವಿರಲಿದೆ. ಉಳಿದಂತೆ ಕಂಟೈನ್ಮೆಂಟ್ ಹೊರಗಿನ ಪ್ರದೇಶಗಳಲ್ಲಿ ತುರ್ತು ಕರ್ತವ್ಯಗಳು, ಅಗತ್ಯ ಸೇವೆ ಒದಗಿಸುವ ಸಂಸ್ಥೆಗಳು, ದಿನಸಿ ಅಂಗಡಿಗಳು, ಆಸ್ಪತ್ರೆ, ಫಾರ್ಮಾ ಸಂಬಂಧಿತ ಸಂಸ್ಥೆಗಳು, ದೂರವಾಣಿ ಮತ್ತು ಇಂಟರ್ ನೆಟ್ ಸೇವೆ, ವಿದ್ಯುತ್, ಪೆಟ್ರೋಲಿಯಂ, ಬ್ಯಾಂಕಿಂಗ್, ಐಟಿ, ಆಹಾರ ಸರಕು ಸಾಗಾಣೆ ವಾಹನ ಮತ್ತು ಮಾಧ್ಯಮಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಮಹಾರಾಷ್ಟ್ರದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಜನರು ಸ್ವಯಂ ಪ್ರೇರಿತ ಜನತಾ ಕಫ್ರ್ಯೂ ಜಾರಿ ಮಾಡುತ್ತಿದ್ದಾರೆ. ನಾಗಪುರದಲ್ಲೂ ವಾರಾಂತ್ಯಗಳಲ್ಲಿ ಜನತಾ ಕಫ್ರ್ಯೂ ವಿಧಿಸಲಾಗಿದೆ. ನಗರದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣ ಹಾಗೂ ಸಾವುಗಳನ್ನು ಗಮನದಲ್ಲಿಟ್ಟುಕೊಂಡು ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬೇಡಿಕೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಾಗ್ಪುರ ಮೇಯರ್ ಸಂದೀಪ್ ಜೋಶಿ ತಿಳಿಸಿದ್ದರು.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 97,894 ಹೊಸ ಪ್ರಕರಣಗಳು ಮತ್ತು 1,132 ಸಾವುಗಳು ಸಂಭವಿಸಿವೆ. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗುರುವಾರಕ್ಕೆ 51 ಲಕ್ಷವನ್ನು ದಾಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 51,18,253ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು 10,09,976 ಸಕ್ರಿಯ ಪ್ರಕರಣಗಳಿದ್ದು, 40,25,080 ಮಂದಿ ಮಾರಣಾಂತಿಕ ವೈರಸ್‍ನಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿಗೆ ಇದುವರೆಗೂ 83,198 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿಯನ್ನು ಬಿಡುಗಡೆ ಮಾಡಿದೆ.

Click to comment

Leave a Reply

Your email address will not be published. Required fields are marked *