Connect with us

Bengaluru City

ಕಾರಜೋಳ ಪುತ್ರನಿಗೆ 23 ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

Published

on

– ಕುಟುಂಬದ ಕಷ್ಟಗಳನ್ನ ಬಿಚ್ಚಿಟ್ಟ ಡಿಸಿಎಂ

ಬೆಂಗಳೂರು: ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕೊರೊನಾ ಸಂಕಷ್ಟಕ್ಕೆ ತುತ್ತಾಗಿರೋದರಿಂದ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲು ಆಗುತ್ತಿಲ್ಲ ಎಂದು ಹೇಳಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಇದೀಗ ಮಾಧ್ಯಮ ಪ್ರಕಟನೆ ಮೂಲಕ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿರುವ ಪುತ್ರನಿಗೆ 23 ದಿನಗಳಿಂದ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿರುವ ವಿಷಯ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟನೆ:
ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು. ನನ್ನ ಪುತ್ರ ಡಾ. ಗೋಪಾಲ್ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೊನಾ ಸೋಂಕಿನಿಂದ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ.

ಇಂತಹ ಗತ್ಯಂತರ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರ ಸಲಹೆ ಇದೆ. ದೂರದ ಪ್ರಯಾಣ ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ.

ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಪ್ರವಾಹ ಪೀಡಿತ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂತ್ರಸ್ತರ ಪರಿಹಾರಕ್ಕೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳನ್ನು ಜಿಲ್ಲಾಡಳಿತಕ್ಕೆ ಖಚಿತವಾಗಿ ನಿರ್ದೇಶಿಸಿದ್ದೇನೆ. ಅದರ ಸತತ ಉಸ್ತುವಾರಿಯಲ್ಲಿ ಇದ್ದೇನೆ. ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿಲ್ಲದಿರಬಹುದು. ಆದರೆ ಜವಾಬ್ದಾರಿಯಿಂದ ಉಪಮುಖ್ಯಮಂತ್ರಿಯಾಗಿ, ಜಿಲ್ಲಾಉಸ್ತುವಾರಿ ಸಚಿವರಾಗಿ ನೊಂದವರ ಪರಿಹಾರಕ್ಕೆ ಶ್ರಮಿಸುತ್ತಿದ್ದೇನೆ.

ಮಾತುಗಳಿಂದ ಇಲ್ಲವೇ ಘೋಷಣೆಗಳಿಂದ ಅಥವಾ ಟೀಕೆ ಟಿಪ್ಪಣಿಗಳಿಂದ ಸಂತ್ರಸ್ತರ ಪರಿಹಾರ ಕಾರ್ಯ ಆಗಲಾರದು. ಅದಕ್ಕೆ ಬೇಕಾದುದು ಸರ್ಕಾರದ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಟೀಕೆ ಟಿಪ್ಪಣಿಗಳಿಗೆ ಮಾರುಹೋಗದೇ ಸರ್ಕಾರದ ವಿಶ್ವಾಸಾರ್ಹ ಕ್ರಮಗಳನ್ನು ಗಮನಿಸಬೇಕೆಂದು ಎಂದು ಗೋವಿಂದ್ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.

ಯುಗಾದಿಯಿಂದ ಆರಂಭವಾದ ಈ ಕೊರೊನಾ ವೈರಾಣು ನಿವಾರಣೆ ಹಾಗೂ ನೊಂದವರ ಕಲ್ಯಾಣಕ್ಕೆ ನಾನು ಕೈಗೊಂಡಿರುವ ಕಾರ್ಯ, ಪರಿಹಾರಕ್ರಮಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಸ್ಮರಿಸಬೇಕು. 2009ರ ಅತಿವೃಷ್ಟಿ ಸಂದರ್ಭದ ಪರಿಸ್ಥಿತಿಯಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಸಂತ್ರಸ್ತರ ರಕ್ಷಣಾ ಕಾರ್ಯ, ಪರಿಹಾರಕಾರ್ಯಗಳನ್ನು ಕೈಗೊಂಡಿರುವ ಕ್ರಮದ ಬಗ್ಗೆ ತಮ್ಮಲ್ಲರಿಗೂ ತಿಳಿದ ಸಂಗತಿಯಾಗಿದೆ.

ವರ್ತಮಾನದ ಒಂದು ಘಟನೆಯಿಂದಷ್ಟೇ ವ್ಯಕ್ತಿಯನ್ನು ಅಳೆಯಲು ಹೋಗಬಾರದು. ಹಿಂದಿನ ವಿದ್ಯಾಮಾನಗಳು ಈಗಿನ ಸ್ಥಿತಿಯನ್ನು ಗುರುತಿಸಲು ಯಾವತ್ತಿಗೂ ನಿರ್ಣಾಯಕ ಎಂಬುದು ನನ್ನ ತಿಳುವಳಿಕೆ. ಈ ಸಂದರ್ಭದಲ್ಲಿ ಪರಂಪರೆಯ ಬೆಳಕಿನಲ್ಲಿ ವರ್ತಮಾನದ ಕತ್ತಲನ್ನು ಓಡಿಸಿ ಭವಿಷ್ಯಕ್ಕೆ ಬೆಳಕನ್ನು ತರುವ ಕಡೆ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಮುನ್ನಡೆಯುವುದು ನಾನು ತೊಟ್ಟಿರುವ ಧೀಕ್ಷೆ. ಇದಕ್ಕೆ ಇಡೀ ಕರ್ನಾಟಕದ ಜನತೆಯ ಆರೈಕೆ/ ಹಾರೈಕೆ ಅಗತ್ಯ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in