Connect with us

ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ – 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ

ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ – 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ

-ಟೊಯೊಟಾ ಕಿರ್ಲೋಸ್ಕರ್ ಕಂಪನಿಯಿಂದ ಡಾ.ಸಿಎನ್.ಅಶ್ವತ್ಥನಾರಾಯಣರಿಗೆ ಹಸ್ತಾಂತರ

ಬೆಂಗಳೂರು: ಈಗಾಗಲೇ ರಾಮನಗರ ಜಿಲ್ಲೆಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಮತ್ತಷ್ಟು ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣರವರಿಗೆ ಸೋಮವಾರ ಹಸ್ತಾಂತರ ಮಾಡಿದೆ.

ಬೆಂಗಳೂರಿನಲ್ಲಿ ಡಿಸಿಎಂ ಅವರನ್ನು ಭೇಟಿಯಾದ ಕಂಪನಿಯ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗ್ಡೆ ಹಾಗೂ ಹಿರಿಯ ವ್ಯವಸ್ಥಾಪಕ ಕಿರಣ್ ರವರು 3.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದರು.

ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನರವರು ಜಿಲ್ಲಾಡಳಿತದ ಪರವಾಗಿ ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿದರು. 8 ನೆಬಲೈಸರ್‍ಗಳು, 20 ಗ್ಲೂಕೋ ಮೀಟರ್‌ಗಳು, 5 ಆಂಬೂ ಬ್ಯಾಗ್, 48 ಪಲ್ಸ್ ಆಕ್ಸಿ ಮೀಟರ್, 200 ನೋಸಲ್ ಪ್ರಾಂಗ್ಸ್, 250 ಆಕ್ಸಿಜನ್ ಮಾಸ್ಕ್, 20 ಆಮ್ಲಜನಕ ಸಾಂದ್ರಕ ಹಾಗೂ 5 ಮಲ್ಟಿ ಪ್ಯಾರಾ ಬೆಡ್ ಸೈಡ್ ಮಾನೀಟರ್‌ಗಳನ್ನು ಹಸ್ತಾಂತರ ಮಾಡಲಾಯಿತು. ಇನ್ನೊಂದು ವಾರದಲ್ಲಿ 30 ಆಮ್ಲಜನಕ ಸಾಂದ್ರಕ ಸರಬರಾಜು ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಈಗಾಗಲೇ ಜಿಲ್ಲೆಗೆ ಹಲವಾರು ರೀತಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೆರವಾಗಿದೆ. ಈಗ ಕೋವಿಡ್ ಸಂಕಷ್ಟದಲ್ಲಿ ಅಗತ್ಯವಾದ ವಿವಿಧ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ. ಇದಕ್ಕಾಗಿ ಕಂಪನಿಗೆ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು.

ಟೊಯೊಟಾ ಕಂಪನಿ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗಡೆ, ಹಿರಿಯ ವ್ಯವಸ್ಥಾಪಕ ಕಿರಣರವರು ಈ ವೇಳೆ ಉಪಸ್ಥಿತಿಯಿದ್ದರು.

Advertisement
Advertisement