Connect with us

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ: ಡಿಸಿಎಂ ಅಶ್ವತ್ಥ ನಾರಾಯಣ್

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ: ಡಿಸಿಎಂ ಅಶ್ವತ್ಥ ನಾರಾಯಣ್

ಬೆಂಗಳೂರು: ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 7ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಲ್ಲೇಶ್ವರ ಹಾಗೂ ದಾಸರಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಆಯೋಜಿಸಿದ್ದ ಸೇವಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ದಾಸರಹಳ್ಳಿ ಕ್ಷೇತ್ರಕ್ಕೆ 5 ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರ ಮಾಡಿದ ನಂತರ ಡಿಸಿಎಂ ಅವರು ಮಾತನಾಡಿದರು.

ಇದೊಂದು ಅತ್ಯುತ್ತಮ ಆಸ್ಪತ್ರೆಯಾಗಲಿದ್ದು ಐಸಿಯು, ವೆಂಟಿಲೇಟರ್ ಸೇರಿ ಪ್ರತ್ಯೇಕ ಆಕ್ಸಿಜನ್ ಜನರೇಟರ್ ಅನ್ನು ಅಳವಡಿಸಲಾಗುವುದು. ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಆಸ್ಪತ್ರೆಯನ್ನು ತ್ವರಿತವಾಗಿ ನಿರ್ಮಾಣ ಮಾಡಲಿದೆ ಎಂದು ಅವರು ಘೋಷಿಸಿದರು.

ಆರೋಗ್ಯದ ಜತೆಗೆ ಶಿಕ್ಷಣಕ್ಕೂ ಸರಕಾರ ಆದ್ಯತೆ ನೀಡುತ್ತಿದೆ. ದಾಸರಹಳ್ಳಿ ಕ್ಷೇತ್ರಕ್ಕೆ ಆಸ್ಪತ್ರೆ ಜತೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಜೂರು ಮಾಡಲಾಗಿದೆ ಎಂದ ಅವರು, ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕ್ಷೇತ್ರಕ್ಕೆ ಔಷಧಿ, ವೆಂಟಿಲೇಟರ್, ಆಕ್ಸಿಜನ್ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಇದುವರೆಗೂ ದೇಶದಲ್ಲಿ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಡಿಸೆಂಬರ್ ಹೊತ್ತಿಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಕೊಡಲಾಗುವುದು ಎಂದರು.

ಡಿಸಿಎಂ ನಗರ ಸಂಚಾರ
ಬೆಳಗ್ಗೆಯಿಂದಲೇ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವೂ ಸೇರಿ ನಗರದ ವಿವಿಧೆಡೆ ಸಂಚರಿಸಿದ ಡಾ.ಅಶ್ವತ್ಥನಾರಾಯಣ ಅವರು ಪಕ್ಷದ ಕಾರ್ಯಕರ್ತರು, ಕೋವಿಡ್ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಯನ್ನು ಭೇಟಿ ಮಾಡಿದರು.

ಮೊದಲಿಗೆ ಅರಮನೆ ನಗರ ವಾರ್ಡ್ ಆರ್‍ಎಂವಿ ಬಡಾವಣೆ ನಿವಾಸಿಗಳ ಸಂಘದ ಪಾರ್ಕ್‍ನಲ್ಲಿ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪಾಲ್ಗೊಂಡ ಅವರು, ಅಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪಿನ ಜನಕ್ಕೆ ನೀಡಲಾಗುತ್ತಿದ್ದ ಲಸಿಕೆ ಮಾಹಿತಿಯನ್ನು ಪಡೆದುಕೊಂಡರು. ವೈದ್ಯರು, ಸಿಬ್ಬಂದಿ ಹಾಗೂ ಲಸಿಕೆ ಪಡೆಯಲು ಬಂದಿದ್ದ ಹಿರಿಯ ನಾಗರೀಕರ ಯೋಗಕ್ಷೇಮ ವಿಚಾರಿಸಿದರು, ಈ ಸಂದರ್ಭದಲ್ಲಿ ಎಲ್ಲ ಹಿರಿಯರು ಸರಕಾರದ ಕೋವಿಡ್ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗುಟ್ಟಹಳ್ಳಿ ವಾರ್ಡ್ ನಲ್ಲಿ ಸೇವಾ ಹೀ ಸಂಘಟನೆ ಮೂಲಕ ಬಡವರು, ಮುಂಚೂಣಿ ಕಾರ್ಯಕರ್ತರಾದ ಪೌರ ಕಾರ್ಮಿಕರು, ಬೆಸ್ಕಾಂ ಮತ್ತು ಒಳಚರಂಡಿ & ಜಲಮಂಡಳಿ ಕಾರ್ಮಿಕರಿಗೆ ಆಹಾರ ದಾನ್ಯದ ಕಿಟ್?ಗಳನ್ನು ವಿತರಿಸಿದರು. ಬಳಿಕ ಕಾಡುಮಲ್ಲೇಶ್ವರ ವಾರ್ಡ್‍ನ ಸಮುದಾಯ ಭವನದಲ್ಲಿ ವ್ಯಾಕ್ಸಿನ್ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.

ಸಿಹಿ, ಫುಡ್ ಕಿಟ್ ಹಂಚಿದ ಡಿಸಿಎಂ:
ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಕಾರಣ ಎಲ್ಲ ಕಡೆಗಳಲ್ಲೂ ಲಸಿಕೆ ಪಡೆಯಲು ಬಂದು ಸಾಲಿನಲ್ಲಿ ನಿಂತಿದ್ದ ಎಲ್ಲರಿಗೂ ಡಿಸಿಎಂ ಸ್ವತಃ ಸಿಹಿ ಹಂಚಿದರು. ಅದೇ ರೀತಿ ಎಂಎಸ್‍ಆರ್ ನಗರದಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳು ಮತ್ತು ಪ್ರೆಶರ್ ಕುಕ್ಕರ್‍ಗಳನ್ನು ವಿತರಣೆ ಮಾಡಿದರು. ಅಲ್ಲದೆ, ಪೌರ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿದರು. ಮಾಜಿ ಶಾಸಕ ಮುನಿರಾಜು ಅವರೊಂದಿಗೆ ದಾಸರಹಳ್ಳಿ ಪಿಎಚ್‍ಸಿಗೆ ಭೇಟಿ ನೀಡಿ, ಅಲ್ಲಿನ ಅರೆ ವೈದ್ಯ ಸಿಬ್ಬಂದಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ದಾಸರಹಳ್ಳಿ ಮಂಡಲ ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಪಕ್ಷವೂ ಒಡೆದಾಳುವ ರಾಜಕೀ ಮಾಡಿಕೊಂಡು ದೇಶದ ಹಿತವನ್ನು ಕಡೆಗಣಿಸಿದವು. ಕೋವಿಡ್‍ನಂಥ ಸಂಕಷ್ಟ ಕಾಲದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ನಡೆಸಿದವು ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟುವಾಗಿ ಟೀಕಿಸಿದರು.

ಮೋದಿ ನೇತೃತ್ವದಲ್ಲಿ ಇಡೀ ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ. ದೇಶದ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಓರ್ವ ಮಹಾಪುರುಷ, ಯುಗಪುರುಷ ನಮ್ಮ ದೇಶದ ಪ್ರಧಾನಿಯಾಗಿರುವುದು ಅದೃಷ್ಟದ ಸಂಗತಿ. ಇದನ್ನು ಪ್ರತಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದರು.

ಮೋದಿ ಬರುವ ತನಕ ನಮ್ಮ ದೇಶದಲ್ಲಿ ಒಂದು ವೇಂಟಿಲೇಟರ್ ತಯಾರಾಗುತ್ತಿರಲಿಲ್ಲ. ಮಾಸ್ಕ್, ಸ್ಯಾನಿಟೈರ್, ಪಿಪಿಇ ಕಿಟ್ ಇರಲಿಲ್ಲ. ಪ್ರತಿಯೊಂದಕ್ಕೂ ಇನ್ನೊಂದು ದೇಶವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಈಗ ಕೇವಲ ಒಂದೇ ವರ್ಷದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದೇವೆ. ಅಷ್ಟೇ ಏಕೆ? ಆಮ್ಲಜನಕ ಸಾಂದ್ರಕಗಳನ್ನೂ ಈಗ ಆತ್ಮನಿರ್ಭರ್ ಭಾರತ ಕಲ್ಪನೆಯಡಿ ನಮ್ಮಲ್ಲಿಯೇ ತಯಾರು ಮಾಡಿಕೊಳ್ಳುತ್ತಿದ್ದೇವೆ ಎಂದರೆ ಹುಡುಗಾಟಿಕೆ ಅಲ್ಲ ಎಂದು ಅವರು ನುಡಿದರು.

ಇಡೀ ದಿನದ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಮುನಿರಾಜು, ಪಕ್ಷದ ಮಂಡಲಾಧ್ಯಕ್ಷ ಲೊಕೇಶ್, ಅರಮನೆ ನಗರ ವಾರ್ಡಿನ ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಕೇಶವ್, ಮತ್ತೀಕೆರೆ ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್, ಅದೇ ವಾರ್ಡಿನ ಪಕ್ಷ ಅಧ್ಯಕ್ಷ ಪ್ರೇಮ್ ಕುಮಾರ್, ಪಕ್ಷದ ಕಾರ್ಯಕರ್ತರು ಡಿಸಿಎಂ ಜತೆಯಲ್ಲಿದ್ದರು.

Advertisement
Advertisement