Connect with us

Davanagere

ಜಿಂದಾಲ್‍ಗೆ ನೀಡ್ತಿರೋದು ರೈತರ ಭೂಮಿ ಅಲ್ಲ ಸರ್ಕಾರದ್ದು : ಕೆ.ಸಿ ಕೊಂಡಯ್ಯ

Published

on

ದಾವಣಗೆರೆ: ಜಿಂದಾಲ್ ಕಂಪನಿಗೆ ರೈತರ ಭೂಮಿಯನ್ನು ಯಾರೂ ಕೊಡ್ತಿಲ್ಲ. ಸರ್ಕಾರದ ಭೂಮಿಯನ್ನು ನೀಡಲಾಗುತ್ತಿದೆ ಎಂದು ಬಳ್ಳಾರಿಯ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್‍ಗೆ ಸರ್ಕಾರಿ ಭೂಮಿ ನೀಡುವುದನ್ನು ವಿರೋಧಿಸುವುದು ಸರಿಯಲ್ಲ. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ಒಳ್ಳೆಯ ಕೆಲಸ ಮಾಡುವಾಗ ನೂರಾರು ವಿಘ್ನಗಳು ಬರುತ್ತವೆ. ಕನ್ನಡಪು ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರು ಬಂದು ವಿರೋಧ ಮಾಡುತ್ತಾರೆ. ಇಲ್ಲಿ ರೈತರ ಭೂಮಿಯನ್ನು ಯಾರೂ ಕೊಡ್ತಿಲ್ಲ. ಸರ್ಕಾರದ ಭೂಮಿಯನ್ನು ನೀಡಲಾಗುತ್ತಿದೆ. ಜಿಂದಾಲ್ ಒಳ್ಳೆಯ ಕಂಪನಿ. ಅದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದು ಸರ್ಕಾರಿ ಭೂಮಿ ಪರಭಾರೆಯನ್ನು ಕೆ.ಸಿ ಕೊಂಡಯ್ಯ ಸಮರ್ಥಿಸಿಕೊಂಡರು.

ಸರ್ಕಾರದಿಂದ ನ್ಯಾಯಯುತವಾಗಿ ಭೂಮಿಯನ್ನು ಜಿಂದಾಲ್‍ಗೆ ನೀಡಲಾಗುತ್ತಿದೆ. ಉದ್ಯಮಗಳಿಗೆ ಹೀಗೆ ತಡೆ ಮಾಡಿದರೆ ಮುಂದೆ ಕೈಗಾರಿಕೆಗಳು ರಾಜ್ಯಕ್ಕೆ ಬರುವುದೇ ಕಷ್ಟವಾಗುತ್ತದೆ. ಸ್ವಪಕ್ಷದವರು ವಿರೋಧ ಮಾಡುವುದು ಅವರ ವೈಯಕ್ತಿಕ ವಿಚಾರ. ದಾಖಲೆಗಳನ್ನು ತೆಗೆದುಕೊಂಡು ಬಂದು ಯಾರೂ ಕೂಡ ಚರ್ಚೆ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ಸತ್ಯಾಂಶ ತಿಳಿದವರು ಯಾರೂ ಕೂಡ ಇದಕ್ಕೆ ವಿರೋಧ ಮಾಡುವುದಿಲ್ಲ ಎಂದು ಹೇಳಿದರು.