Saturday, 25th January 2020

ಶಾಸಕರ ಜನಸಂಪರ್ಕ ಕಚೇರಿಗೆ ಓಡೋಡಿ ಬಂದ ರೇಣುಕಾಚಾರ್ಯ

ದಾವಣಗೆರೆ: ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೀಡಬೇಕಾಗಿದ್ದ ಪರಿಹಾರ ಸಾಮಗ್ರಿಗಳನ್ನು ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಇಟ್ಟುಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡುತ್ತಿದಂತೆ ಶಾಸಕ ರೇಣುಕಾಚಾರ್ಯ ಅವರು ಓಡೋಡಿ ಬಂದು ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುತ್ತಾಮುತ್ತ ಕಳೆದ ನಾಲ್ಕೈದು ತಿಂಗಳ ಹಿಂದೆ ತುಂಗಾಭದ್ರ ನದಿಯ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ತಾಲ್ಲೂಕಿನ ಸುತ್ತ ಮುತ್ತಲಿನ ಗ್ರಾಮದ ಜನರು ನಿರಾಶ್ರಿತರಿಗೆ ನೆರವಾಗಲು ಅಗತ್ಯ ಸಾಮಗ್ರಿಗಳನ್ನು ಹಾಗೂ ದವಸ ಧಾನ್ಯಗಳನ್ನು ನೀಡಿದ್ದರು. ಆದರೆ ಶಾಸಕ ರೇಣುಕಾಚಾರ್ಯ ಅವರಿಗೆ ಒಪ್ಪಿಸಿದ ಸಾಮಗ್ರಿಗಳನ್ನು ನಿರಾಶ್ರಿತರಿಗೆ ನೀಡದೆ ಶಾಸಕರ ಜನ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿತ್ತು. ಕಿಂಟ್ವಾಲ್ ಗಟ್ಟಲೆ ಸಾಮಗ್ರಿಗಳನ್ನು ಹೆಚ್ಚು ದಿನಗಳ ಕಾಲ ಸಂಗ್ರಹಿಸಿಟ್ಟ ಕಾರಣ ಹಾಳಾಗುವ ಹಂತಕ್ಕೆ ತಲುಪಿದ್ದವು, ಈ ಕುರಿತ ವರದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು.

ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಶಾಸಕ ರೇಣುಚಾರ್ಯ ಅವರು, ಕೂಡಲೇ ಸ್ಥಳಕ್ಕೆ ಓಡೋಡಿ ಬಂದು, ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಹೊನ್ನಾಳಿಯಲ್ಲಿರುವ ನನ್ನ ಕಚೇರಿಗೆ ಇದೂವರೆಗೂ ನಾನು ಆಗಮಿಸಿಲ್ಲ. ಸಂಗ್ರಹಿಸಿದ್ದ 46 ಲಕ್ಷ ರೂ. ಹಣವನ್ನು ಸಿಎಂ ಪರಿಹಾರ ನಿಧಿ ನೀಡಿದ್ದೇವೆ. ರೈತರಿಗೆ ಪರಿಹಾರವಾಗಿ ನೀಡಿದ್ದ ಹಣ ಅವರ ಬ್ಯಾಂಕ್ ಖಾತೆ ಜಮೆ ಮಾಡಿದ್ದೇವೆ. 7000 ಬಟ್ಟೆ, 35 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ತಾಲೂಕು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳಿಗೆ ಸಂಗ್ರಹಿಸಿರುವ ವಸ್ತುಗಳನ್ನು ಜನರಿಗೆ ತಲುಪಿಸಲು ಹೇಳಿದ್ದರು. ಆದರೆ ಸದ್ಯ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯ ವಿಳಂಬವಾಗಿದೆ. ನಾನು ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಕಾರಣದಿಂದ ವಿತರಣೆ ಮಾಡಲು ತಡವಾಗಿದೆ. ಇಲ್ಲಿರುವ ಯಾವುದೇ ಸಾಮಗ್ರಿಗಳು ದುರ್ಬಳಕೆ ಆಗಿಲ್ಲ, ಇನ್ನೊಂದು ವಾರದಲ್ಲಿ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ವಿತರಣೆ ಮಾಡುತ್ತೇನೆ. ಯಾವುದೇ ವಸ್ತುಗಳು ಹಾಳಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *