Davanagere
ಹೊನ್ನಾಳಿಯಲ್ಲಿ ದೇವರ ಕೋಣಕ್ಕೆ ಮೂರು ಗ್ರಾಮಸ್ಥರ ಜಗಳ: ಕೊನೆಗೆ ಠಾಣೆಯಲ್ಲಿ ಇತ್ಯರ್ಥ

– ದೇವರ ಮೊರೆ ಹೋದ ಗ್ರಾಮಸ್ಥರು
– ಪೊಲೀಸರ ಸಂಧಾನ ಯಶಸ್ವಿ
ದಾವಣಗೆರೆ: ದೇವರಿಗೆ ಬಿಟ್ಟಿದ್ದ ಒಂದು ಕೋಣಕ್ಕೆ ಮೂರು ಗ್ರಾಮದ ಜನರು ಜಟಾಪಟಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಒಂದೇ ಕೋಣವನ್ನು ನಮ್ಮದು ಎಂದು ಮೂರು ಗ್ರಾಮಗಳ ಜನರು ಪಟ್ಟುಹಿಡಿದಿದ್ದಾರೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೋಣಕ್ಕಾಗಿ ವಾದವಿವಾದಗಳು ನಡೆದು ಕೊನೆಗೆ ಪೊಲೀಸ್ ಠಾಣೆಯಲ್ಲಿ ವಿಚಾರ ಇತ್ಯರ್ಥವಾಗಿದೆ.
ಏನಿದು ಗಲಾಟೆ?
ಸಾಸ್ವೆಹಳ್ಳಿ ಗ್ರಾಮಕ್ಕೆ ನಾಲ್ಕು ವರ್ಷಗಳ ಹಿಂದೆ ಮರಿಕೋಣವು ಎಲ್ಲಿಂದಲೋ ಬಂದಿತ್ತು. ಅದೇ ಗ್ರಾಮದಲ್ಲಿ ಓಡಾಡಿಕೊಂಡಿತ್ತು. ಈಗ ಅಲ್ಲಿನ ಗ್ರಾಮದ ಜನರು ಆ ಕೋಣವನ್ನು ಸಾಸ್ವೇಹಳ್ಳಿ ಗ್ರಾಮದ ಗ್ರಾಮಸ್ಥರು ಆಂಜನೇಯ ದೇವಸ್ಥಾನಕ್ಕೆ ದೇವರ ಕೋಣ ಎಂದು ಬಿಟ್ಟದ್ದರು.
ಈ ನಡುವೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಜಂಬರಗಟ್ಟೆ ಗ್ರಾಮದಿಂದ 70 ಜನ ಬಂದು, ಹದಿನೈದು ದಿನಗಳಿಂದ ತಮ್ಮ ಗ್ರಾಮದ ಕೋಣವನ್ನು ಹುಡುಕುತ್ತಿದ್ದೆವು. ಗ್ರಾಮ ದೇವತೆ ದುರ್ಗಾದೇವಿಯು ಉತ್ತರ ಭಾಗದಲ್ಲಿ ನಮ್ಮ ದೇವರ ಕೋಣ ಸಿಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ನಾವು ಹುಡುಕುತ್ತ ಬಂದೆವು. ಈ ಗ್ರಾಮದಲ್ಲಿ ನಮ್ಮ ಕೋಣ ಸಿಕ್ಕಿದೆ. ಸಾಸ್ವೆಹಳ್ಳಿಯಲ್ಲಿರುವ ಕೋಣ ನಮ್ಮದು ಎಂದು ಕೋಣವನ್ನು ಹಿಡಿದು ಪಟ್ಟು ಹಿಡಿದಿದ್ದಾರೆ.
ಇತ್ತ ನ್ಯಾಮತಿ ತಾಲ್ಲೂಕಿನ ಮಡಿಕೆ ಚೀಲೂರಿನ ಗ್ರಾಮಸ್ಥರು ಕೂಡ ಈ ಕೋಣ ನಮ್ಮ ಗ್ರಾಮದ ದೇವರ ಕೋಣ ಎಂದು ತಕರಾರು ತೆಗೆದಿದ್ದಾರೆ. ಇದರಿಂದ ಸಾಸ್ವೆಹಳ್ಳಿ ಗ್ರಾಮದಲ್ಲಿ ಮೂರು ಗ್ರಾಮದ ಗ್ರಾಮಸ್ಥರು ಕೋಣಕ್ಕಾಗಿ ವಾದ ವಿವಾದಗಳನ್ನು ನಡೆಸುತ್ತಿದ್ದರು.
ದೇವರ ಮೊರೆ ಹೋದ ಗ್ರಾಮಸ್ಥರು: ಸಾಸ್ವೆಹಳ್ಳಿ ಕೋಟೆ ಆಂಜನೇಯ ದೇವಸ್ಥಾನ ಸಮಿತಿಯವರು ಗ್ರಾಮದಲ್ಲಿ ಹನುಮಂತ ದೇವರ ಅಪ್ಪಣೆ ಕೇಳಿ ಯಾರಿಗೆ ವರ ನೀಡುತ್ತದೆಯೋ ಅವರು ಕೋಣ ತೆಗೆದುಕೊಂಡು ಹೋಗಬಹುದು ಎಂದರು. ಮಧ್ಯರಾತ್ರಿಯವರೆಗೂ ಯಾರಿಗೂ ದೇವರು ಅಪ್ಪಣೆ ನೀಡಲಿಲ್ಲ. ನಂತರ ನ್ಯಾಮತಿ ತಾಲೂಕಿನ ಮಡಿಕೆ ಚೀಲೂರು ಗ್ರಾಮಕ್ಕೆ ಕರೆದೊಯ್ದಿದ್ದು, ಆ ಗ್ರಾಮದ ದೇವರ ಅಪ್ಪಣೆ ಪಡೆದು ಒಯ್ಯಲು ತೀರ್ಮಾನ ಮಾಡಿದ್ದಾರೆ. ಆದರೆ ಮಡಿಕೆ ಚೀಲೂರಿನವರಿಗೆ ದೇವರು ಅಪ್ಪಣೆ ನೀಡದ ಕಾರಣ ಅವರು ಜಂಬರಗಟ್ಟೆ ಗ್ರಾಮದವರಿಗೆ ಒಯ್ಯುವಂತೆ ಸೂಚಿಸಿದರು. ಜಂಬರಗಟ್ಟೆ ಗ್ರಾಮದ ದೇವತೆ ಅಪ್ಪಣೆ ನೀಡಿದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.
ಠಾಣೆಯಲ್ಲಿ ಇತ್ಯರ್ಥ: ದೇವರ ಕೋಣದ ವಿವಾದ ಇತ್ಯರ್ಥ ಆಯ್ತು ಎನ್ನುವಷ್ಟರಲ್ಲಿ ಮರಿಗೊಂಡನಹಳ್ಳಿಯ ಗ್ರಾಮಸ್ಥರು ಪೊಲೀಸರೊಂದಿಗೆ ಬಂದು, ಇದು ನಮ್ಮೂರಿನ ಕೋಣ ಎಂದು ತಕರಾರು ತೆಗೆದಿದ್ದಾರೆ. ಕಳೆದ ಕೆಲ ದಿನಗಳಿಂದ ನಮ್ಮ ಗ್ರಾಮದ ದೇವರ ಕೋಣ ಕಾಣೆಯಾಗಿದೆ. ಇದೇ ನಮ್ಮ ಗ್ರಾಮದ ಕೋಣ ಎಂದು ಪಟ್ಟು ಹಿಡಿದಿದ್ದಾರೆ.
ವಾದ ವಿವಾದದ ನಡುವೆ ಪ್ರವೇಶಿದ ಹೊನ್ನಾಳಿ ಠಾಣೆ ಪೊಲೀಸರು ಬಂಜರಗಟ್ಟೆ ಹಾಗೂ ಮರಿಗೊಂಡನಹಳ್ಳಿ ಗ್ರಾಮದವರಿಂದ ಸಾಕ್ಷಿ, ಪುರಾವೆ ಕೇಳಿ ಚರ್ಚಿಸಿದರು. ಸಮಸ್ಯೆ ಬಿಗಡಾಯಿಸಿದ್ದರಿಂದ ಕೋಣವನ್ನು ಪೊಲೀಸ್ ಠಾಣೆಗೆ ವಾಹನ ಸಮೇತ ಒಯ್ಯಲಾಯಿತು. ನಂತರ ಹೊನ್ನಾಳಿ ಠಾಣೆಯ ಬಂದು, ಎರಡೂ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ, ಕೋಣಕ್ಕಾಗಿ ಗ್ರಾಮಗಳ ನಡುವೆ ವೈಷಮ್ಯ ಮೂಡಿಸುವುದು ಬೇಡ ಎಂದು ಸಂಧಾನ ಸೂತ್ರ ಅನುಸರಿಸಿ ಎಂದು ಮನವಿ ಮಾಡಿಕೊಂಡು, ಮರಿಗೊಂಡನಹಳ್ಳಿ ಗ್ರಾಮದವರ ಮನವೊಲಿಸಿ ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯಲು ಅನುಮತಿ ನೀಡಿದರು.
