Crime
ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದ ಶಿಕ್ಷಕಿ

ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಶ್ರೀದೇವಿ (38), ಅನುಷಾ (10), ನೂತನ್ (08) ಆತ್ಮಹತ್ಯೆಗೆ ಶರಣಾದ ತಾಯಿ ಮಕ್ಕಳು. ದಾವಣಗೆರೆ ನಗರದ ಹೊರವಲಯದ ಎಚ್ ಕಲ್ಪನಹಳ್ಳಿ ಬಳಿ ತುಂಗಭದ್ರ ಕಾಲುವೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆಯ ಜಯನಗರದಲ್ಲಿ ಮೃತರು ವಾಸವಾಗಿದ್ದರು. ವೃತ್ತಿಯಲ್ಲಿ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದ ಶ್ರೀದೇವಿ ಅವರು ಪತಿ ಜೊತೆ ಮನೆ ಕಟ್ಟುವ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು.
ಇದರಿಂದ ನೊಂದ ಶ್ರೀದೇವಿ ಮಕ್ಕಳನ್ನು ತಮ್ಮ ಸ್ಕೂಟಿಯಲ್ಲಿ ಕರೆದುಕೊಂಡು ಬಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶವಗಳನ್ನು ಹೊರ ತೆಗೆಯಲಾಗಿದ್ದು, ಜಿಲ್ಲಾಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
