Wednesday, 26th February 2020

Recent News

ಜೈಲಿನಿಂದ ಹೊರ ಬಂದವನನ್ನು ಅಟ್ಟಾಡಿಸಿಕೊಂಡು ಹೊಡೆದ ಗ್ಯಾಂಗ್

ದಾವಣಗೆರೆ: ತನ್ನ ಗ್ಯಾಂಗ್‍ನ ಹುಡುಗನನ್ನು ಕೊಲೆ ಮಾಡಿದ್ದಾನೆ ಎಂದು ಹಳೇ ದ್ವೇಷ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ಯುವಕನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವಿನಾಯಕ ನಗರದ ನಿವಾಸಿ ಆಶೋಕ್ ಗಂಭೀರವಾಗಿ ಹಲ್ಲೆಗೊಳಗಾದ ಯುವಕ. ನಗರದ ಹೈಟೆಕ್ ಆಸ್ಪತ್ರೆಯಲ್ಲಿ ಸದ್ಯ ಅಶೋಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. 2 ವರ್ಷಗಳ ಹಿಂದೆ ಪಿಬಿ ರಸ್ತೆಯಲ್ಲಿರುವ ಖಾಲಿ ನಿವೇಶನದಲ್ಲಿ ಬಕ್ಲಾಸ್ ಗೇಮ್ (ಬೆಟ್ಟಿಂಗ್ ಆಟ) ಆಡುವಾಗ ಯುವಕರ ನಡುವೆ ಜಗಳವಾಗಿ ಭರತ್ ಎಂಬಾತನ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಆಶೋಕ್ ಪ್ರಮುಖ ಆರೋಪಿಯಾಗಿದ್ದು, ಜೈಲಿಗೂ ಕೂಡ ಹೋಗಿ ಕೆಲ ದಿನಗಳ ಹಿಂದೆ ಹೊರ ಬಂದಿದ್ದ.

ಅಶೋಕ್ ಬಿಡುಗಡೆಯಾಗಿದ್ದನ್ನು ಗಮನಿಸಿದ ಮತ್ತೊಂದು ಗ್ಯಾಂಗ್‍ನ ಯುವಕರು ಆತನನ್ನು ಕೊಲೆ ಮಾಡಲು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಶೋಕ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಶೋಕ್‍ನಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಹಳೆ ದ್ವೇಷವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದ್ದು, ಬಡಾವಣೆ ಪೊಲೀಸರು ಪ್ರಕರಣ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *