Monday, 17th June 2019

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 8 ದರೋಡೆಕೋರರ ಬಂಧನ, 248 ಕೆ.ಜಿ ಬೆಳ್ಳಿ ವಶ

ದಾವಣಗೆರೆ: ಹೆದ್ದಾರಿಗಳಲ್ಲಿ ಕಾರುಗಳನ್ನು ನಿಲ್ಲಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡುವವರನ್ನು ಬಂಧಿಸುವಲ್ಲಿ ಜಿಲ್ಲೆಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಬರಿ ಮಾಡಿ ಬೆಳ್ಳಿ ದೋಚಿದ್ದ ಎಂಟು ಜನರ ಬಂಧನ ಮಾಡಿದ್ದು, ಮಹರಾಷ್ಟ್ರ ಮೂಲದ ನಿಸಾರ್, ರಾಹುಲ್, ನದೀಮ್, ಜಾಕೀರ್, ಬಳ್ಳಾರಿಯ ನಾಗರಾಜ್, ಶ್ಯಾಮ್ ಸುಂದರ್, ಮನೋಹರ್ ಮತ್ತು ಉದಯ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 240 ಕೆಜಿ ಬೆಳ್ಳಿ, ಎರಡು ಕಾರ್, ಒಂದು ರಿವಾಲ್ವರ್ ಹಾಗೂ ಐದು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿ ಸುಮಾರು 40 ಕೆ.ಜಿಯ 700 ಬೆಳ್ಳಿ ದೀಪಗಳು ವಶ

ಕಳೆದ ಡಿಸೆಂಬರ್ 29 ರಂದು ಕೊಲ್ಲಾಪುರದಿಂದ ತಮಿಳುನಾಡಿಗೆ ಬೆಳ್ಳಿ ಆಭರಣ ಮಾಡಿಸಿಕೊಳ್ಳಲು ಜಗನ್ನಾಥ್ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಇವರನ್ನ ಹಿಂಬಾಲಿಸಿದ ಹೆದ್ದಾರಿ ಹಂತಕರ ತಂಡ, ಒಂದು ದಿನ ಪೂರ್ತಿ ಅವರ ಹಿಂದೆಯೇ ತಿರುಗಿದ್ದಾರೆ. ಅಲ್ಲದೆ ಬಳ್ಳಾರಿಯಲ್ಲಿ ಕಾಂಟ್ಯಾಕ್ಟ್ ಇಟ್ಟುಕೊಂಡಿದ್ದ ತಂಡಕ್ಕೆ ಬೆಳ್ಳಿ ತಗೆದುಕೊಂಡು ಹೋಗುತ್ತಿರುವುದರ ಮಾಹಿತಿ ನೀಡಿದ್ದಾರೆ.

ಈ ವೇಳೆ ಮತ್ತೊಂದು ತಂಡ ಕೂಡ ಇವರೊಂದಿಗೆ ಜಗನ್ನಾಥ್ ಅವರನ್ನ ಹಿಂಬಾಲಿಸಿಕೊಂಡು ಬಂದು 29ರ ರಾತ್ರಿ 3:30ಕ್ಕೆ ದಾವಣಗೆರೆ ತಾಲೂಕು ಹೆಬ್ಬಾಳ್ ಟೋಲ್ ಮುಂಭಾಗದ ಹುಣಸೆಕಟ್ಟೆ ಗ್ರಾಮದ ಬಳಿ ಅಡ್ಡಗಟ್ಟಿ ಜಗನ್ನಾಥ್ ಅವರನ್ನ ರಿವಾಲ್ವಾರ್ ನಿಂದ ಬೆದರಿಸಿ ಕಾರಿನಲ್ಲಿದ್ದ ಸುಮಾರು 300 ಕೆ.ಜಿ ಬೆಳ್ಳಿ ಗಟ್ಟಿಯನ್ನು ಹೊತ್ತೊಯ್ದಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದ ಜಗನ್ನಾಥ್ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರಿಂದ, ಪೊಲೀಸರು ಹೆದ್ದಾರಿ ಹಂತಕರನ್ನ ಬಂಧಿಸಿ ಅವರಿಂದ 58 ಲಕ್ಷ ಮೌಲ್ಯದ ಸುಮಾರು 248 ಕೆ.ಜಿ ಬೆಳ್ಳಿ ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಎಸ್.ಪಿ ಚೇತನ್ ಆರ್ ಹೇಳಿದ್ದಾರೆ.

ಹೆದ್ದಾರಿ ಡಕಾಯಿತರಲ್ಲಿ ನಿಸಾರ್, ಈ ಹಿಂದೆಯ ಜ್ಯುವೆಲ್ಲರಿ ಮಾಲೀಕ ಜಗನ್ನಾಥ್ ಅವರಿಗೆ ಪರಿಚಯವಾಗಿದ್ದನು. ಅಲ್ಲದೆ ಕೆಲವೊಂದು ಕೆಲಸಕ್ಕೆ ನಿಸಾರ್ ಅವರನ್ನ ಜಗನ್ನಾಥ್ ಬಳಸಿಕೊಂಡಿದ್ದರು. ಆದರೆ 28 ರಂದು ಜಗನ್ನಾಥ್ ಅವರು ಬೆಳ್ಳಿ ತೆಗೆದುಕೊಂಡು ತಮಿಳುನಾಡಿಗೆ ಹೋಗುವ ವಿಚಾರ ತಿಳಿದ ಮೇಲೆ ಅವರನ್ನ ಇತರೆ ಡಕಾಯಿತರಾದ ರಾಹುಲ್, ನದೀಮ್, ಜಾಕೀರ್, ಅವರನ್ನ ಬಳಸಿಕೊಂಡು ಜಗನ್ನಾಥ್ ಅವರ ಕಾರನ್ನ ಹಿಂಬಾಲಿಸಿದ್ದಾರೆ. ಜೊತೆಗೆ ಕರ್ನಾಟಕದವರಾದ ಬಳ್ಳಾರಿ ನಾಗ, ಶ್ಯಾಮ್ ಮನೋಹರ್, ಉದಯ್, ಅವರಿಗೆ ಮಾಹಿತಿ ಮುಟ್ಟಿಸಿದ್ದಾರಲ್ಲದೆ ಕೃತ್ಯಕ್ಕೆ ಅವರ ಸಾಥ್ ಕೂಡ ಪಡೆದುಕೊಂಡಿದ್ದಾರೆ. ಈ ವೇಳೆ ಎಲ್ಲರೂ ಒಟ್ಟುಗೂಡಿ ಹೆಬ್ಬಾಳ್ ಟೂಲ್ ಬಳಿಯ ಹುಣಸೆಕಟ್ಟೆ ಗ್ರಾಮದ ಬಳಿ ಅಡ್ಡಗಟ್ಟಿ ಗನ್ ನಿಂದ ಹೆದರಿಸಿ ಅವರ ಬಳಿ ಇದ್ದ ಬೆಳ್ಳಿ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಕೇವಲ 10 ದಿನದಲ್ಲಿ ಬೆಳ್ಳಿ ಕದ್ದು ಜ್ಯುವೆಲ್ಲರಿ ಮಾಲೀಕರಿಗೆ ಭಯ ಹುಟ್ಟಿಸಿದ್ದ ಹೆದ್ದಾರಿ ಚೋರರು ಈಗ ಕಂಬಿ ಹಿಂದೆ ಅಂದರ್ ಆಗಿದ್ದಾರೆ. ಅಲ್ಲದೆ ಈ ಹಂತಕರನ್ನ ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್‍ಪಿ ಚೇತನ್ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *