Connect with us

Crime

ಎಚ್ಚರಿಕೆ ಕೊಟ್ರೂ ಅಕ್ಕನೊಂದಿಗೆ ಅಕ್ರಮ ಸಂಬಂಧ ಬಿಡದ ವ್ಯಕ್ತಿಯನ್ನ ಕೊಲೆಗೈದ ಸಹೋದರರು

Published

on

– ಕೃತ್ಯಕ್ಕೆ ಸಹಾಯ ನೀಡಿದ್ದ ಸ್ನೇಹಿತ ಸೇರಿ ನಾಲ್ವರು ಅರೆಸ್ಟ್

ದಾವಣಗೆರೆ: ನಮ್ಮ ಅಕ್ಕನೊಂದಿಗೆ ಅಕ್ರಮ ಸಂಬಂಧ ಬಿಟ್ಟುಬಿಡು ಎಂದು ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ವ್ಯಕ್ತಿಯನ್ನ ಮಹಿಳೆಯ ಸಹೋದರರು ಬರ್ಬರವಾಗಿ ಕೊಲೆಗೈದ ಘಟನೆ ಹರಿಹರದಲ್ಲಿ ನಡೆದಿದೆ.

ದಾವಣಗೆರೆಯ ದೊಡ್ಡಬಾತಿ ಗ್ರಾಮದ ನಿವಾಸಿ ಹರೀಶ್ (29) ಕೊಲೆಯಾದ ವ್ಯಕ್ತಿ. ನಾಗರಾಜ, ಮಾರುತಿ, ರಾಘವೇಂದ್ರ ಹಾಗೂ ರಮೇಶ ಕೊಲೆಗೈದ ಆರೋಪಿಗಳು. ಹರಿಹರದ ಹೊರ ವಲಯದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು, 24 ಗಂಟೆಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹರಿಹರ ಹೊರ ವಲಯದ ಡಾಬಾದಲ್ಲಿ ಹರೀಶ್ ಅಡುಗೆ ಭಟ್ಟನಾಗಿದ್ದ. ಡಾಬಾ ಸಮೀಪದ ಪ್ರದೇಶದಿಂದ ಮಹಿಳೆಯೊಬ್ಬಳು ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಳು. ಮಹಿಳೆಯ ಪತಿ ತೀರಿಕೊಂಡಿದ್ದ ಬಗ್ಗೆ ತಿಳಿದುಕೊಂಡಿದ್ದ ಹರೀಶ್ ಆಕೆಯ ಜೊತೆಗೆ ಸಲುಗೆಯಿಂದ ಇದ್ದ. ಈ ವಿಚಾರ ಮಹಿಳೆಯ ಸಹೋದರರಾದ ನಾಗರಾಜ, ಮಾರುತಿ ಹಾಗೂ ರಾಘವೇಂದ್ರ ಗೊತ್ತಾಗಿತ್ತು. ಹೀಗಾಗಿ ಹರೀಶ್‍ಗೆ ಮೂರು ಬಾರಿ ಎಚ್ಚರಿಕೆ ಕೊಟ್ಟಿದ್ದರು.

ನಮ್ಮ ಅಕ್ಕನ ಜೊತೆಗೆ ಮತ್ತೆ ಕಾಣಿಸಿಕೊಂಡರೆ ಸುಮ್ಮನೆ ಬಿಡುವುದಿಲ್ಲ ಎಂದು ಇತ್ತೀಚೆಗಷ್ಟೇ ಆರೋಪಿಗಳು ವಾರ್ನಿಂಗ್ ಕೂಡ ನೀಡಿದ್ದರು. ಆದರೆ ಇದಕ್ಕೆ ಕ್ಯಾರೇ ಎನ್ನದ ಹರೀಶ್, ಸೋಮವಾರ ರಾತ್ರಿ ಡಾಬಾ ಸಮೀಪದ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಜೊತೆಗೆ ಕುಳಿತಿದ್ದ. ಇದನ್ನು ನೋಡಿದ ಸ್ಥಳೀಯರೊಬ್ಬರು ಮಹಿಳೆಯ ಸಹೋದರರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ನಾಗರಾಜ ಸಹೋದರರು ಸ್ನೇಹಿತ ರಮೇಶ್ ಜೊತೆಗೆ ಸೇರಿ ಡಾಬಾಗೆ ಹೋಗಿ ಹಮೇಶ್‍ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಹರೀಶ್‍ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆಗೈದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹರಿಹರ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಡಾಬಾ ಮಾಲೀಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆ ಒಳಪಡಿಸಿದಾಗ ಹರೀಶ್ ಅಕ್ರಮ ಸಂಬಂಧ ಹೊಂದಿದ್ದ ಮಾಹಿತಿ ಲಭ್ಯವಾಗಿತ್ತು. ಈ ಮೂಲಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಹರಿಹರ ನಗರ ಠಾಣೆ ಪೊಲೀಸರ ಕಾರ್ಯಕ್ಕೆ ಎಸ್‍ಪಿ ಅಭಿನಂದನೆ ಸಲ್ಲಿಸಿದ್ದಾರೆ.