Monday, 24th June 2019

ಮೈಸೂರಿನಂತೆ ಮಂಗ್ಳೂರು, ಗದಗದಲ್ಲೂ ನಾಡಹಬ್ಬದ ಸಂಭ್ರಮ

ಮಂಗಳೂರು/ಗದಗ: ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರು ದಸರಾ ಖ್ಯಾತಿಯೂ ಏರುತ್ತಿದೆ. ಅಲ್ಲದೇ ಗದಗದ ಲಕ್ಷ್ಮೇಶ್ವರದಲ್ಲಿ 45 ವರ್ಷಗಳ ನಂತರ ಅದ್ಧೂರಿಯಾಗಿ 9 ದಿನಗಳವರೆಗೆ ದಸರಾ ದರ್ಬಾರ್ ನಡೆಯಲಿದ್ದು, ಲಕ್ಷ್ಮೇಶ್ವರ ಪಟ್ಟಣ ನವ ವಧುವಿನಂತೆ ಶೃಂಗಾರಗೊಂಡಿದೆ.

ಹಿಂದೆ ದಸರಾ ಅಂದ್ರೆ ಮೈಸೂರು ಅನ್ನುವುದಷ್ಟೇ ರಾಜ್ಯದ ಜನರಿಗಿತ್ತು. ಆದ್ರೀಗ ಮಂಗಳೂರು ದಸರಾ ಕೂಡ ದೇಶದಲ್ಲಿ ಗುರುತಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಕಳೆಗಟ್ಟಿದ್ದು, 10 ದಿನಗಳ ವೈಭವದ ಉತ್ಸವಕ್ಕೆ ಇಂದು ಅದ್ಧೂರಿ ಚಾಲನೆ ಸಿಗಲಿದೆ. ಅಕ್ಟೋಬರ್ 14ರಂದು ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಈಗಾಗಲೇ ಇಡೀ ಮಂಗಳೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ವಿಜಯದಶಮಿಯಂದು ಸುದೀರ್ಘ ದಸರಾ ಮೆರವಣಿಗೆ ನಡೆಯಲಿದೆ. 75ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ 9 ಕಿಮೀ ಉದ್ದಕ್ಕೆ 16 ಗಂಟೆಗಳ ಕಾಲ ಮೆರವಣಿಗೆ ನಡೆಯೋದು ಇಲ್ಲಿನ ವಿಶೇಷ ಅಂತ ಕುದ್ರೋಳಿ ಕ್ಷೇತ್ರದ ಟ್ರಸ್ಟಿ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ಇತ್ತ ಗದಗದ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ದಸರಾ ಧರ್ಮಸಮ್ಮೇಳನದ ದರ್ಬಾರ್ ಆರಂಭವಾಗಿದೆ. ಮಂಗಳವಾರ ಶ್ರೀಗಳು ಪುರಪ್ರವೇಶಿಸಿದ್ದು, 1008 ಮುತೈದೆಯರಿಂದ ಕುಂಭಮೇಳ ಗಜರಾಜನ ಹಾಗೂ ಕುದುರೆ ಗಾಂಭಿರ್ಯ ನಡಿಗೆ, ಮಹಿಳೆಯ ಡೊಳ್ಳು ಕುಣಿತ, ಜಗ್ಗಲಗಿ, ಕರಡಿ ಮಜಲು, ವೀರಗಾಸೆ ಕುಣಿತ ಹೀಗೆ ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಗೆ ನಡೀತು.

9 ದಿನಗಳವರೆಗೆ ಪ್ರತಿದಿನ ಬೆಳಗ್ಗೆ ಜಗದ್ಗರುಗಳ ಇಷ್ಟ ಲಿಂಗಪೂಜೆ, ದಸರಾ ಧರ್ಮ ಸಮ್ಮೆಳನ, ಸಂಗೀತ, ಕವಿಗೊಷ್ಠಿ, ಉಪನ್ಯಾಸ ಹೀಗೆ ಅನೇಕ ಕಾರ್ಯಕ್ರಮಗಳು ಜರುಗಲಿವೆ. ಜಗದ್ಗುರುಗಳ ಪಲ್ಲಕ್ಕಿ ಉತ್ಸವ ಮೂಲಕ ದಸರಾ ಸಮ್ಮೇಳನಕ್ಕೆ ಚಾಲನೆ ನೀಡಲಾಯ್ತು ಅಂತ ಮುಕ್ತಿಮಂದಿರದ ವಿಮಲ ರೇಣುಕ ಶಿವಾಚಾರ್ಯಸ್ವಾಮೀಜಿ ಹೇಳಿದ್ದಾರೆ.

ಒಟ್ಟಿನಲ್ಲಿ ಕಡಲತಡಿ ಮಂಗಳೂರು, ಗದಗದ ಲಕ್ಷ್ಮೇಶ್ವರ 10 ದಿನಗಳ ಕಾಲ ದಸರಾ ಸಂಭ್ರಮದಲ್ಲಿ ಮಿಂದೇಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *