Sunday, 19th August 2018

ಮುಂದುವರಿದ ವರುಣನ ಆರ್ಭಟ- ಶಾಲಾ-ಕಾಲೇಜಿಗೆ ರಜೆ, ಅಪಾಯದ ಮಟ್ಟ ಮೀರಿದ ತುಂಗಾಭದ್ರ ಜಲಾಶಯ

ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಡಿಕೇರಿ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಕರ್ನಾಟಕ – ಕೇರಳ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪೆರುಂಬಾಡಿ – ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ 25 ಕಡೆಗಳಲ್ಲಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜುಲೈ 12ರ ವರೆಗೆ ವಾಹನ ಸಂಚಾರ ನಿಷೇಧಗೊಳಿಸಿ ಡಿಸಿ ಶ್ರೀ ವಿದ್ಯಾ ಆದೇಶಿಸಿದ್ದಾರೆ. ಮಳೆಯಿಂದಾಗಿ ಅಂಗನವಾಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲಾ – ಕಾಲೇಜುಗಳಿಗೆ ಇಂದೂ ಸಹ ರಜೆ ಘೋಷಿಸಲಾಗಿದೆ.

ಮಲೆನಾಡು ಕೊಡಗು ಜಿಲ್ಲೆಯಲ್ಲಿ ಮುಂಗಾರು ತೀವ್ರಗೊಂಡಿದ್ದು, ಬಿಟ್ಟುಬಿಡದೇ ನಿರಂತರವಾಗಿ ಮಳೆ ಆಗುತ್ತಿದೆ. ಮಡಿಕೇರಿಯಲ್ಲಿ ಬುಧವಾರ ರಾತ್ರಿ ನಿಲ್ಲಿಸಿದ್ದ ಕಾರಿನ ಮೇಲೆ ಮಣ್ಣು ಕುಸಿದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿ ಆಗಿದೆ. ಇದರಿಂದ ಭಗಂಡೇಶ್ವರ ದೇವಾಲಯ ಜಲಾವೃತವಾಗಿದೆ.

ಮಡಿಕೇರಿ, ಭಾಗಮಂಡಲ, ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಭಾಗಮಂಡಲ ದೇವಾಲಯಕ್ಕೆ ತೆರಳಲು ಜಿಲ್ಲಾಡಳಿತದಿಂದ ದೋಣಿ ವ್ಯವಸ್ಥೆ ಮಾಡಲಾಗಿದೆ. ಕನಿಕೆ, ಸುಜೋತಿ, ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿಯುತ್ತಿದೆ. ಬೆಟ್ಟಗುಡ್ಡ ಹಾಗೂ ನದಿ ಅಂಚಿನಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ದಕ್ಷಿಣ ಕನ್ನಡದಲ್ಲೂ ನಿರಂತರ ಮಳೆ ಆಗುತ್ತಿದ್ದು, ಪುತ್ತೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್.ಆರ್ ಪುರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ಮತ್ತು ಭದ್ರಾ ನದಿಗಳು. ಹೇಮಾವತಿ ನದಿಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿರಂತರ ಮಳೆಯಿಂದಾಗಿ ಇಂದು ಸಹ ಚಾರ್ಮಾಡಿ ಘಾಟ್‍ ನಲ್ಲಿ ಭೂ ಕುಸಿತ ಉಂಟಾಗಿದೆ.

Leave a Reply

Your email address will not be published. Required fields are marked *