Connect with us

Cricket

ಕುಕ್ಕೆ ಸುಬ್ರಹ್ಮಣ್ಯನಿಗಿದ್ದಾನೆ ಮತ್ತೊಬ್ಬ ಅಪ್ಪಟ ಕ್ರಿಕೆಟ್ ಆಟಗಾರ ಭಕ್ತ

Published

on

ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ, ಜಗತ್ತಿನೆಲ್ಲೆಡೆ ಭಕ್ತರನ್ನು ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯನಿಗೂ ಭಾರತೀಯ ಕ್ರಿಕೆಟ್ ತಂಡಕ್ಕೂ ಇರುವ ನಂಟಿನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ರವಿಶಾಸ್ತ್ರಿ, ಮನೀಶ್ ಪಾಂಡೆ, ಕೆ.ಎಲ್.ರಾಹುಲ್ ಸೇರಿದಂತೆ ಬಹುತೇಕ ಎಲ್ಲಾ ಕ್ರಿಕೆಟಿಗರು ಕುಕ್ಕೆ ಸುಬ್ರಹ್ಮಣ್ಯ ಬಂದು ತಮ್ಮ ಯಶಸ್ಸಿನ ಮೆಟ್ಟಿಲನ್ನು ಗಟ್ಟಿಗೊಳಿಸಿದವರೇ. ಇದೀಗ ಪ್ರಸ್ತುತ ಇರುವ ಕ್ರಿಕೆಟ್ ತಂಡದಲ್ಲೂ ಒಬ್ಬ ಕ್ರೀಡಾಳು ಭಾರತೀಯ ಕ್ರಿಕೆಟ್ ತಂಡ ದೇಶ, ವಿದೇಶ ನೆಲದಲ್ಲಿ ಆಟವಾಡಲು ಹೋಗುವ ಮೊದಲು ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಸೇವೆ ಸಲ್ಲಿಸುತ್ತಾರೆ.

ಭಾರತೀಯ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಡಿ.ರಾಘವೇಂದ್ರ ಕಳೆದ ಇಪ್ಪತ್ತು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪ್ರಾರ್ಥನೆ ಮಾಡಿ, ತಮ್ಮ ಇಷ್ಟಾರ್ಥ ಪೂರೈಸಿಕೊಂಡಿದ್ದಾರೆ. ಕುಮುಟಾದ ತನ್ನ ಮನೆಯಿಂದ ಹೊರಬಂದು ಬೆಂಗಳೂರಿಗೆ ಸೇರಿದ್ದ ರಾಘವೇಂದ್ರ ಒಪ್ಪತ್ತಿನ ಊಟಕ್ಕೂ ಪರದಾಡಿದ ದಿನಗಳು ಸಾಕಷ್ಟಿವೆ. ಎಳವೆಯಲ್ಲೇ ಕ್ರಿಕೆಟ್‍ನ ಹುಚ್ಚು ತಲೆಗೆ ಹಚ್ಚಿಸಿಕೊಂಡಿದ್ದ ರಾಘವೇಂದ್ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ನೋಡಿಯೇ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡವರು. ಕ್ರೀಡಾಂಗಣದ ಹೊರಗೆ ಬಂದ ಬಾಲನ್ನು ಹೆಕ್ಕಿಕೊಡುತ್ತಿದ್ದ ರಾಘವೇಂದ್ರ ಇದೀಗ ದೇಶ-ವಿದೇಶಗಳ ಕ್ರಿಕೆಟ್ ತಂಡಕ್ಕೆ ಬೇಕಾದ ಕ್ರೀಡಾಳುವಾಗಿದ್ದಾರೆ. ಮೊದಲ ಬಾರಿಗೆ ಕುಕ್ಕೆಗೆ ಬಂದಾಗ ಕುಕ್ಕೆಯ ಛತ್ರದ ಹೊರಗೆ ಚಾಪೆ ಹಾಕಿ ಮಲಗಿದ್ದ ರಾಘವೇಂದ್ರ ಕುಕ್ಕೆ ಸುಬ್ರಹ್ಮಣ್ಯ ಕೃಪೆಗೆ ಪಾತ್ರರಾಗಿ ಇಂದು ಆಕಾಶದೆತ್ತರಕ್ಕೆ ಬೆಳೆದಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಪ್ಪಟ ಭಕ್ತರಾಗಿರುವ ಡಿ.ರಾಘವೇಂದ್ರ, ತಮ್ಮ ತಂಡ ಪ್ರತೀ ಬಾರಿ ಆಡುವ ಆಟಕ್ಕೆ ಮೊದಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಂಡದ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಾರೆ. ಗೆದ್ದು ಬಂದ ಬಳಿಕ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದು ರಾಘವೇಂದ್ರ ಅವರ ರೂಢಿ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಕ್ಷೇತ್ರದ ಸಿಬ್ಬಂದಿ ಮೂಲಕ ಭಾರತೀಯ ತಂಡದ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ, ಆಸ್ಟ್ರೇಲಿಯಾ ದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲುವು ಸಾಧಿಸಿದ ತಕ್ಷಣವೇ ಕುಕ್ಕೆ ಸುಬ್ರಹ್ಮಣ್ಯದ ಪ್ರೋಟೋಕಾಲ್‌ ಸಿಬ್ಬಂದಿ ಪ್ರಮೋದ್‍ಗೆ ದೂರವಾಣಿ ಕರೆಮಾಡಿ ತಂಡದ ಹೆಸರಿನಲ್ಲಿ ಸುಬ್ರಹ್ಮಣ್ಯನಿಗೆ ಸೇವೆ ಸಲ್ಲಿಸಲು ತಿಳಿಸಿದ್ದಾರೆ.

ಕೇವಲ ಕ್ರಿಕೆಟ್ ಮಾತ್ರವಲ್ಲ, ಇತರ ಕ್ರೀಡಾಳುಗಳು ಕೂಡ ಕುಕ್ಕೆಗೆ ಭೇಟಿ ನೀಡಿ ತಮ್ಮ ಕ್ರೀಡೆಯಲ್ಲಿ ಯಶಸ್ಸು ಗಳಿಸಿದ್ದಾರೆ. ಸುಬ್ರಹ್ಮಣ್ಯ ದೇವರಿಗೂ ಕ್ರೀಡೆಗೂ ಸಾಮ್ಯತೆಯಿದ್ದು, ಸುಬ್ರಹ್ಮಣ್ಯ ಸ್ಚಾಮಿಯ ತಾಯಿ ಪಾರ್ವತಿಯು ತಮ್ಮ ಇಬ್ಬರು ಮಕ್ಕಳಾದ ಗಣಪತಿ ಹಾಗೂ ಸುಬ್ರಹ್ಮಣ್ಯರಿಗೆ ತ್ರಿಲೋಕವನ್ನು ಮೂರು ಬಾರಿ ಸುತ್ತಿ ಬರುವಂತೆ ಸೂಚಿಸಿದ್ದಾರೆ. ಬೇಗ ಸುತ್ತು ಬಂದವರಿಗೆ ಮಾವಿನ ಹಣ್ಣನ್ನು ಬಹುಮಾನವಾಗಿ ನೀಡುವುದಾಗಿಯೂ ಹೇಳಿ ಕ್ರೀಡಾ ಮನೋಭಾವವನ್ನು ಸುಬ್ರಹ್ಮಣ್ಯ ಬಿತ್ತಿದ್ದರು. ಈ ಕಾರಣಕ್ಕಾಗಿಯೇ ಸುಬ್ರಹ್ಮಣ್ಯ ಸನ್ನಿಧಿಗೆ ಬರುವ ಕ್ರೀಡಾಳುಗಳು ಅತ್ಯಂತ ಯಶಸ್ವಿಯಾಗುತ್ತಾರೆ ಎನ್ನುವುದು ಕ್ಷೇತ್ರದ ಹಿರಿಯ ಸಿಬ್ಬಂದಿಯ ನಂಬಿಕೆಯಾಗಿದೆ.

ತನ್ನ ಅಪಾರ ಚಾಕಚಕ್ಯತೆಯ ಥ್ರೋಡೌನ್ ಬಾಲಿಂಗ್‍ನಿಂದ ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುತ್ತಿರುವ ರಾಘವೇಂದ್ರ ಎಷ್ಟೇ ಎತ್ತರಕ್ಕೆ ಬೆಳೆದರೂ ಕುಕ್ಕೆ ಸುಬ್ರಹ್ಮಣ್ಯದ ನಂಟು ಮರೆತಿಲ್ಲ. ಕುಕ್ಕೆ ಸುಬ್ರಹ್ಮಣ್ಯನ ಆಶೀರ್ವಾದ ಈ ಯುವ ಪ್ರತಿಭಾವಂತ ಆಟಗಾರನ ಮೇಲಿರಲಿ. ಆ ಮೂಲಕ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ದೇವಾಲಯದ ಸಿಬ್ಬಂದಿ ಹಾರೈಸಿದ್ದಾರೆ.

 

Click to comment

Leave a Reply

Your email address will not be published. Required fields are marked *