Sunday, 21st July 2019

ಡಿಕೆ ಬ್ರದರ್ಸ್ ದೊಡ್ಡ ಭ್ರಷ್ಟಾಚಾರಿಗಳು: ಸಿ.ಪಿ.ಯೋಗೇಶ್ವರ್

– ಸಚಿವ ಡಿಕೆಶಿ ದೇಶ ಕಂಡ ದೊಡ್ಡ ಭ್ರಷ್ಟ ರಾಜಕಾರಣಿ

ಬೆಂಗಳೂರು: ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಸಹೋದರರು ದೊಡ್ಡ ಭ್ರಷ್ಟಾಚಾರಿಗಳು. ಸಚಿವರು ದೇಶ ಕಂಡ ದೊಡ್ಡ ಭ್ರಷ್ಟ ರಾಜಕಾರಣಿ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಆನೇಕಲ್‍ನ ಸಿಡಿ ಹೊಸಕೋಟೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗಲೂ ಹಣ ಲೂಟಿ ಮಾಡಿದ್ದಾರೆ. ಈಗ ನೀರಾವರಿ ಸಚಿವರಾಗಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಅವರು ನಿರ್ವಹಿಸಿದ ಇಲಾಖೆಗಳಲ್ಲಿ ಸಾಕಷ್ಟು ಹಗರಣಗಳನ್ನು ಮಾಡಿದ್ದಾರೆ. ಇಂತಹ ಭ್ರಷ್ಟರನ್ನು ಮತ್ತೆ ಮಂತ್ರಿಯನ್ನಾಗಿ ಮಾಡಿರುವುದು ಸರಿಯಲ್ಲ ಎಂದು ದೂರಿದರು.

ಸಂಸದ ಡಿ.ಕೆ.ಸುರೇಶ್ ಅವರು ಸೋದರ ಡಿ.ಕೆ.ಶಿವಕುಮಾರ್ ಅವರ ಇನ್ನೊಂದು ರೌದ್ರ ಮುಖ. ಈ ಸಹೋದರರು ತಮ್ಮ ಉಳಿವಿಗಾಗಿ ಅಮಾಯಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಇಷ್ಟು ದಿನ ಕನಕಪುರದಲ್ಲಿ ದೌರ್ಜನ್ಯ ಮಾಡಿದ್ದಾರೆ. ಈಗ ಅವರ ದೌರ್ಜನ್ಯ ಆನೇಕಲ್‍ಗೆ ವಿಸ್ತರಿಸಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳ ಜನತೆ ಬಿಜೆಪಿ ಪರವಾಗಿದ್ದಾರೆ. ಕನಕಪುರದಲ್ಲಿಯೂ ಬಿಜೆಪಿಗೆ ಮತ ಹಾಕಲು ಜನ ಕಾತುರದಿಂದ ಕಾಯುತ್ತಿದ್ದಾರೆ ಎಂದರು.

ಕನಕಪುರದ ಜನಕ್ಕೆ ಡಿ.ಕೆ.ಶಿವಕುಮಾರ್ ಸಹೋದರರು ಬೆದರಿಕೆ ಹಾಕಿದ್ದಾರೆ. ಆದರೆ ಇದನ್ನು ಹೇಳಿಕೊಳ್ಳಲು ಜನರು ಭಯ ಪಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ. ಮಿಲಿಟರಿ ಹಾಗೂ ಪೊಲೀಸ್ ಪಡೆಯ ಭದ್ರತೆ ನೀಡಿ ಯಾವುದೇ ಭಯವಿಲ್ಲದೆ ಮತದಾರರು ಮತ ಹಾಕುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್ ಅವರದ್ದು ಒಂದು ದೊಡ್ಡ ಮಾಫಿಯಾ ಇದೆ. ಕನಕಪುರದಲ್ಲಿಯ ಬಂಡೆಗಳನ್ನು ಅಗೆದು ಸರ್ವನಾಶ ಮಾಡಿದ್ದಾರೆ. ಈಗ ಬೆಂಗಳೂರು ಗ್ರಾಮಾಂತರಕ್ಕೆ ಕಾಲಿಟ್ಟಿದ್ದಾರೆ. ಸರ್ಕಾರಿ ಜಾಗ ಹಾಗೂ ಖನಿಜ ಸಂಪತ್ತನ್ನು ಲೂಟಿ ಮಾಡಿರುವುದರಲ್ಲಿ ಡಿ.ಕೆ. ಬ್ರದರ್ಸ್ ನಿಸ್ಸಿಮರು. ಬೇನಾಮಿ ಕ್ವಾರಿಗಳ ಸರದಾರರು ಎಂದು ಸಿಪಿ ಯೋಗೆಶ್ವರ್ ದೂರಿದರು.

Leave a Reply

Your email address will not be published. Required fields are marked *