Connect with us

Bengaluru City

ಫಲಿತಾಂಶದಿಂದ ದಿಗ್ಭ್ರಮೆ, ಸಹೋದರ ಗೆದ್ದಿರೋದು ಸಂತೋಷವಾಗ್ತಿಲ್ಲ: ಡಿಕೆಶಿ

Published

on

– ಮಾಧ್ಯಮಗಳ ಜೊತೆ ಮಾತನಾಡಬಾರದು ಅನ್ನೋ ಸೂಚನೆ ಇದೆ
– ಸೋಲಿನ ಬಗ್ಗೆ ವಿಮರ್ಷೆ, ವಿಷಯ ಸಂಗ್ರಹ

ಬೆಂಗಳೂರು: ಲೋಕಸಭೆ ಫಲಿತಾಂಶದಿಂದ ನನಗೆ ದಿಗ್ಭ್ರಮೆ ಆಶ್ಚರ್ಯವಾಗಿದೆ. ಇಂತಹ ಫಲಿತಾಂಶ ನಾನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನನ್ನ ಸಹೋದರ ಡಿ.ಕೆ ಸುರೇಶ್ ಗೆದ್ದಿರುವುದು ನನಗೆ ಸಂತೋಷವಾಗುತ್ತಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕುಟುಂಬದೊಡನೆ ವಿದೇಶ ಪ್ರವಾಸದಲ್ಲಿದ್ದ ಡಿಕೆಶಿ ಅವರು ಬೆಂಗಳೂರಿಗೆ ಮರಳಿದ್ದಾರೆ. ಹೀಗಾಗಿ ಇಂದು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ನಾಯಕರ ಅನುಮತಿ ಪಡೆದು ಕುಟುಂಬಕ್ಕೆ ಟೈಂ ಕೊಡಲು ಪ್ರವಾಸ ಹೋಗಿದ್ದೆ. ಆದರೆ ನನಗೆ ಪ್ರವಾಸದಲ್ಲೇ ವಿಷಯ ಗೊತ್ತಾಯ್ತು. ಈ ತರಹದ ಫಲಿತಾಂಶವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ದೇವೇಗೌಡರು ಸೇರಿ 10 ಸಂಸದರು ಸೋತಿದ್ದು ಅಚ್ಚರಿ ಮೂಡಿಸಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸೋಲಿನ ಬಗ್ಗೆ ವಿಮರ್ಶೆ ಮಾಡುತ್ತೇವೆ. ನನ್ನ ಸಹೋದರ ಗೆದ್ದಿರುವುದು ನನಗೆ ಸಂತೋಷವಾಗುತ್ತಿಲ್ಲ ಎಂದು ಬೇಸರದ ನುಡಿಗಳನ್ನಾಡಿದರು.

ದೇಶಕ್ಕೆ ಖರ್ಗೆ, ದೇವೇಗೌಡರ ಹೋರಾಟ ಹೆಚ್ಚಿದೆ. ಅವರ ಚರಿತ್ರೆಗಳು ಇತಿಹಾಸ ಸೇರುತ್ತಾ ಅಂತ ಅನ್ನಿಸುತ್ತಿದೆ. ನನ್ನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ 3 ಲಕ್ಷ ಲೀಡ್ ಬರುತ್ತದೆ ಎಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಚುನಾವಣೆ ಫಲಿತಾಂಶದಲ್ಲಿ ಹೆಚ್ಚು ನಿರೀಕ್ಷೆ ಇತ್ತು, ಈ ಸೋಲು ನನಗೆ ನಂಬಲು ಆಗ್ತಿಲ್ಲ. 10 ಜನರು ಅಭ್ಯರ್ಥಿ ಇದ್ದರೂ 1 ಸ್ಥಾನ ಗೆದ್ದಿರೋದನ್ನ ನಂಬೋಕೆ ಆಗುತ್ತಿಲ್ಲ. ಯಾಕೆ ಹೀಗೆ ಆಗಿದೆ ವಿಮರ್ಶೆ ಮಾಡುತ್ತೇನೆ. ಎಲ್ಲಿ ಸಮಸ್ಯೆ ಆಗಿದೆ ಎನ್ನುವುದರ ಬಗ್ಗೆ ವಿಷಯ ಸಂಗ್ರಹ ಮಾಡುತ್ತೇನೆ ಎಂದರು.

ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರವಾಗಿ ಮಾತನಾಡಿ, ಇದು ಕ್ಯಾಬಿನೆಟ್ ನಿರ್ಧಾರ. ಇದು ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿದ್ದು, ಬಂಡವಾಳ ಹೂಡಿಕೆಗಾಗಿ ಸಮಾವೇಶ ಮಾಡಿದ್ದೇವು. ಜಿಂದಾಲ್ ನಮ್ಮ ರಾಜ್ಯಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ. ಉದ್ಯೋಗ, ವಿದ್ಯುತ್ ಸೇರಿದಂತೆ ಉತ್ತಮ ಕೆಲಸ ಜಿಂದಾಲ್ ರಾಜ್ಯಕ್ಕೆ ನೀಡಿದೆ. ಹಿಂದಿನ ಸರ್ಕಾರಕ್ಕೆ ಮಾತುಕೊಟ್ಟಂತೆ ಜಿಂದಾಲ್‍ಗೆ ಭೂಮಿ ನೀಡಲಾಗುತ್ತಿದೆ. ಇದು ತಪ್ಪಲ್ಲ, ಹಿಂದೆ ನಾನು ಇನ್ಫೋಸಿಸ್‍ಗೆ ಜಾಗ ನೀಡಿದಾಗಲೂ ವಿರೋಧ ವ್ಯಕ್ತವಾಗಿತ್ತು. ಆದರೆ ಅದರಿಂದ ಬಳಿಕ ಹೆಚ್ಚು ಅನುಕೂಲವಾಗಿತ್ತು. ಬಂಡವಾಳ ಹೂಡಿಕೆ ಮಾಡುವವರಿಗೆ ಅನುಕೂಲ ಮಾಡಬೇಕು. ಉದ್ಯಮಗಳಿಗೆ ಅನುಕೂಲವಾಗಲು ಜಾಗಗಳನ್ನ ನೀಡಬೇಕು. ಕೆಲವೊಂದು ಸಮಯದಲ್ಲಿ ಕೆಲವನ್ನು ಪಡೆಯಬೇಕಾದರೆ, ಇನ್ನೂ ಕೆಲವನ್ನು ಕಳೆದುಕೊಳ್ಳಬೇಕು ಎಂದು ಜಿಂದಾಲ್‍ಗೆ ಭೂಮಿ ನೀಡುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಸಮ್ಮಿಶ್ರ ಸರ್ಕಾರಕ್ಕೆ ಕೊಟ್ಟ ಮಾತು ಉಳಿಸಿಕೊಳ್ತೀವಿ. ಯಾರ ವೈಯಕ್ತಿಕ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪಕ್ಷದ ಕಾರ್ಯಕರ್ತ. ನಮ್ಮ ನಾಯಕರು ಮಾಧ್ಯಮಗಳ ಜೊತೆ ಮಾತನಾಡಬೇಡಿ ಅಂತ ಹೇಳಿದ್ದಾರೆ. ಆದರೆ ಇವತ್ತು ಒಂದು ದಿವಸ ಮಾತನಾಡುತ್ತಿದ್ದೇನೆ. ಬೇರೆಯವರ ತರಹ ಬೈಬಾರದು ಅಂತ ಇವತ್ತು ನಾನು ನಿಮ್ಮ ಜೊತೆ ಮಾತಾಡುತ್ತಿದ್ದೇನೆ ಎಂದರು.

ಸರ್ಕಾರ ವಿಸರ್ಜನೆ ಮಾಡಿ ಎನ್ನುವ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರ ಕೈಯಲ್ಲಿ ಎಲ್ಲಾ ಇದೆ. ಅವರ ಕೈಯಲ್ಲಿ ಇರೋದನ್ನ ಮಾಡಲಿ ಎಂದು ಹೇಳಿ ಟಾಂಗ್ ಕೊಟ್ಟರು.

ಲಿಂಗಾಯತರನ್ನ ಕಡೆಗಣಿಸಿದ್ದಾರೆ ಎನ್ನುವ ಬಿಸಿ ಪಾಟೀಲ್ ಹೇಳಿಕೆಯ ಬಗ್ಗೆ ಮಾತನಾಡಿ, ನಾನು ಯಾವುದನ್ನು ನೋಡಿಲ್ಲ. ನಾನು ಯಾರ ವೈಯಕ್ತಿಕ ಅಭಿಪ್ರಾಯಕ್ಕೆ ಉತ್ತರ ಕೊಡುವುದಿಲ್ಲ. ಯಾವ ಜಾತಿ ಬಗ್ಗೆಯೂ ಮಾತನಾಡುವುದಿಲ್ಲ. ಸದ್ಯಕ್ಕೆ ನನ್ನ ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಬಗ್ಗೆ ನನಗೇನು ಗೊತ್ತಿಲ್ಲ. ಮಾಧ್ಯಮಗಳಿಗೆ ಹೋಗಬಾರದು ಅಂತ ಪಕ್ಷ ಹೇಳಿದೆ. ಆದ್ರೆ ನನಗೆ ಇವತ್ತು ಒಂದು ದಿನ ವಿಶೇಷ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.