Wednesday, 13th November 2019

ತೊಟ್ಟಿಲು ತೂಗಿ, ಸಿಎಂ ಪದವಿಗೆ ಮೊರೆ ಹೋದ್ರಾ ಡಿಕೆಶಿ?

ಬಳ್ಳಾರಿ: ಸದ್ಯ ದೋಸ್ತಿ ಸರ್ಕಾರದ ಟ್ರಬಲ್ ಶೂಟರ್ ಸಚಿವ ಡಿ.ಕೆ. ಶಿವಕುಮಾರ್, ಸಿಎಂ ಪದವಿಗಾಗಿ ದೇವರ ಮೊರೆ ಹೋದರಾ ಅನ್ನೋ ಪ್ರಶ್ನೆ ಎದ್ದಿದೆ.

ಸಚಿವ ಶಿವಕುಮಾರ್ ಬಳ್ಳಾರಿಯ ಚಳ್ಳಗುರ್ಕಿಯ ಯರಿತಾತ ದೇವಾಲಯದಲ್ಲಿ ತೊಟ್ಟಿಲು ತೂಗಿದ ನಂತರ ಇಂತಹದ್ದೊಂದು ಪ್ರಶ್ನೆ ಇದೀಗ ಎದ್ದಿದೆ. ಮಂಗಳವಾರ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ನಾಮಪತ್ರ ಸಲ್ಲಿಕೆ ನಂತರ ಪವಾಡ ಪುರುಷ ಯರಿತಾತನ ದೇವಾಲಯದಲ್ಲಿ ತೊಟ್ಟಿಲು ತೂಗಿ ಡಿ.ಕೆ.ಶಿವಕುಮಾರ್ ಬೇಡಿಕೊಂಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಇದೊಂದು ಪುಣ್ಯವಾದ ಕ್ಷೇತ್ರ. ಇಲ್ಲಿ ಇದಕ್ಕೇ ಆದಂತಹ ಇತಿಹಾಸವೂ ಇದೆ. ಇಲ್ಲಿಗೆ ಬಂದು ದರ್ಶನ ಮಾಡಲು ನನಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ. ಹೀಗಾಗಿ ದೇವರ ದರ್ಶನ ಪಡೆದುಕೊಂಡಿದ್ದೇನೆ ಎಂದರು.

ಈ ಬಗ್ಗೆ ನಾನು ಏನು ಮಾತನಾಡಲು ಇಷ್ಟ ಪಡುವುದಿಲ್ಲ. ನನ್ನ ಟಾರ್ಗೆಟ್ ಅವರಲ್ಲ. ಬೇರೆ ಇದೆ ಎಂದು ಸಿಎಂ ಕುಮಾರಸ್ವಾಮಿ ಮತ್ತು ಡಿಕೆಶಿ ಕಳ್ಳೆತ್ತುಗಳು, ರಾತ್ರಿ ಬಂದು ಮೇಯ್ದುಕೊಂಡು ಹೋಗುತ್ತವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಬಳ್ಳಾರಿಯ ಚಳ್ಳಗುರ್ಕಿಯ ಯರಿತಾತ ದೇವಾಲಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತೊಟ್ಟಿಲು ತೂಗಿದರೆ ಅಂದುಕೊಂಡಿದ್ದೆಲ್ಲಾ ನೆರವೇರುತ್ತದೆ ಅನ್ನೋ ಪ್ರತೀತಿ ಇದೆ. ಅಲ್ಲದೆ ಡಿ.ಕೆ.ಶಿ ತೊಟ್ಟಿಲು ತೂಗಿದ ನಂತರ ನನ್ನ ಟಾರ್ಗೆಟ್ ಬೇರೆ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ಉಪಚುನಾವಣೆ ಸಮಯದಲ್ಲೂ ಶಿವಕುಮಾರ್ ಬಳ್ಳಾರಿಯ ಸಂಡೂರಿನ ಜೋಗದ ತಾತನ ಬಳಿ ಹೋಗಿ ಆರ್ಶೀವಾದ ಪಡೆದಿದ್ದರು.

Leave a Reply

Your email address will not be published. Required fields are marked *