Tuesday, 16th July 2019

ತುರ್ತು ಸುದ್ದಿಗೋಷ್ಠಿ ಕರೆದು ಹೊಸ ಬಾಂಬ್ ಸಿಡಿಸಿದ ಡಿ.ಕೆ.ಬ್ರದರ್ಸ್

ಬೆಂಗಳೂರು: ಇಂದು ಬೆಳಗ್ಗೆ ಸಂಸದ ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ, ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ.

ಕಳೆದ 15 ದಿನಗಳಲ್ಲಿ ರಾಜ್ಯ ರಾಜಕೀಯ ಸಾಕಷ್ಟು ಬದಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಅಂತಾ ಡಿ.ಕೆ.ಸುರೇಶ್ ಆರೋಪಿಸಿದರು.

ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐಟಿ, ಇಡಿ ಮೂಲಕ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಇಲಾಖೆಗಳನ್ನು ದುರಪಯೋಗ ಮಾಡಿಕೊಂಡ ಕೇಂದ್ರ ಸರ್ಕಾರ ನಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 11 ಜನರ ಮೇಲೆ ದಾಳಿ ನಡೆಸಲು  ಸಿಬಿಐ ಮತ್ತು ಇಡಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆಯಲಾಗಿದೆ ಎಂಬ ಮಾಹಿತಿಗಳು ನಮಗೆ ಲಭ್ಯವಾಗಿವೆ ಅಂತಾ ತಿಳಿಸಿದ್ರು.

ಬಿಜೆಪಿಯ ಬೆದರಿಕೆ ಮತ್ತು ಆಮಿಷಗಳಿಗೆ ನಾವು ಬಗ್ಗಲ್ಲ. ಈ ಸಂಬಂಧ ಕಾನೂನು ರೀತಿಯಲ್ಲಿ ನಾವು ಹೋರಾಡುತ್ತೇವೆ. ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿರೋದನ್ನು ನಾವು ಜನರಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಯಾವ ಪ್ರಕರಣದಡಿಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬುವುದ ನಮಗೆ ಗೊತ್ತಾಗಿಲ್ಲ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ನಿನ್ನೆ ರಾತ್ರಿ ನಮಗೆ ಈ ಎಲ್ಲ ಮಾಹಿತಿಗಳು ಲಭ್ಯವಾಗಿದೆ. ಹಳ್ಳಿಯಿಂದ ಬಂದು ರಾಜಕಾರಣ ಮಾಡುತ್ತಿದ್ದೇವೆ. ಬಿಜೆಪಿ ನೇರವಾಗಿ ನನ್ನ ಹಾಗು ಡಿಕೆ ಸುರೇಶ್ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದೆ. ನಾವು ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸ ಮಾಡಿದ್ದೇವೆ. ಕೇಂದ್ರ ಯಾವುದೇ ಇಲಾಖೆಗಳನ್ನು ನಮ್ಮ ಮೇಲೆ ಬಿಟ್ಟರೂ ನಾವು ಯಾವುದಕ್ಕೂ ಹೆದರಲ್ಲ. ನಮ್ಮ ರಾಜಕೀಯ ಬೆಳವಣಗೆಯನ್ನು ಕಟ್ಟಿ ಹಾಕಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ರು.

Leave a Reply

Your email address will not be published. Required fields are marked *