Tuesday, 10th December 2019

Recent News

ಗೂಗಲ್ ಪೇ ಮೂಲಕ ವ್ಯಕ್ತಿಗೆ 96 ಸಾವಿರ ವಂಚನೆ

ಮುಂಬೈ: ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವುದು ಈಗ ಸುಲಭ. ಆದರೆ ಇದನ್ನೇ ಈಗ ಸೈಬರ್ ಕಳ್ಳರು ದಾಳವಾಗಿ ಉಪಯೋಗಿಸಿ ಜನರ ಖಾತೆಯಿಂದ ಹಣವನ್ನು ಕದಿಯಲು ಆರಂಭಿಸಿದ್ದಾರೆ.

ಮುಂಬೈ ಮೂಲದ 31 ವರ್ಷದ ವ್ಯಕ್ತಿಯೊಬ್ಬರಿಗೆ ವಂಚಕನೊಬ್ಬ ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ ಎಂದು ಪೋಸ್ ನೀಡಿ 96 ಸಾವಿರ ರೂ. ಹಣವನ್ನು ವಂಚಿಸಿದ್ದಾನೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದು ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವಂಚನೆ ಹೇಗಾಯ್ತು?
ವ್ಯಕ್ತಿಯೊಬ್ಬರು ಗೂಗಲ್ ಪೇ ಮೂಲಕ 96 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಲು ಮುಂದಾಗಿದ್ದರು. ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿದೆ. ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಅವರು ಇಂಟರ್ ನೆಟ್ ನಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದ್ದಾರೆ. ಈ ವೇಳೆ ಒಂದು ನಂಬರ್ ಕಾಣಿಸಿದೆ.

ಕಾಣಿಸಿದ ನಂಬರಿಗೆ ಕರೆ ಮಾಡಿದಾಗ ಆ ವ್ಯಕ್ತಿ “ನಾನು ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ” ಎಂದು ಪೋಸ್ ನೀಡಿ, “ಹಣವನ್ನು ವರ್ಗಾವಣೆ ಮಾಡುವ ಈ ರೀತಿಯ ಸಮಸ್ಯೆಯಾಗುವುದು ಸಾಮಾನ್ಯ. ಈ ಹಿಂದೆ ಹಲವು ಮಂದಿಗೆ ಈ ರೀತಿಯ ಸಮಸ್ಯೆಯಾದಾಗ ನಾನೇ ಕೆಲ ನಿಮಿಷದಲ್ಲಿ ಸರಿ ಮಾಡಿಕೊಟ್ಟಿದ್ದೇನೆ. ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ” ಎಂದು ಹೇಳಿದ್ದಾನೆ. ಇದನ್ನೂ ಓದಿ: ಸಿಮ್ ಸ್ವಾಪಿಂಗ್ ಮಾಡಿ ಉದ್ಯಮಿಯಿಂದ 1.67 ಕೋಟಿ ರೂ. ದೋಚಿದ್ರು

ಇದಾದ ಬಳಿಕ ವಂಚಕ,”ನಾನೊಂದು ಲಿಂಕ್ ಕಳುಹಿಸುತ್ತೇನೆ. ಆ ಲಿಂಕ್ ಕ್ಲಿಕ್ ಮಾಡಿ” ಎಂದು ಸೂಚಿಸಿದ್ದಾನೆ. ಈತನ ಮಾತಿನ ಮೇಲೆ ನಂಬಿಕೆ ಇಟ್ಟು ವ್ಯಕ್ತಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ 96 ಸಾವಿರ ರೂ. ಹಣ ವಂಚಕನ ಖಾತೆಗೆ ಹೋಗಿದೆ. ಹಣ ವರ್ಗಾವಣೆಯದ ನಂತರ ತಾನು ವಂಚನೆ ಒಳಗಾದ ವಿಚಾರ ವ್ಯಕ್ತಿಗೆ ಗೊತ್ತಾಗಿದೆ.

ನಂತರ ಸಂತ್ರಸ್ತ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರತಿಕ್ರಿಯಿಸಿ, ಗೂಗಲ್ ಪೇ ಹೆಸರಲ್ಲಿ ವಂಚನೆ ದೂರು ದಾಖಲಾಗಿದ್ದು ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜಸ್ಥಾನ ವಲಯದ ಮೊಬೈಲ್ ನಂಬರ್ ಬಳಸಿ ಈ ಕೃತ್ಯವನ್ನು ಮಾಡಲಾಗಿದೆ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *