Connect with us

Bengaluru City

ರೈತರನ್ನು ಸ್ವಾವಲಂಬಿ ಮಾಡಲು ಕೇಂದ್ರ ಸರ್ಕಾರದ ಪಣ: ಸಿ.ಟಿ.ರವಿ

Published

on

Share this

ಬೆಂಗಳೂರು: ರೈತನನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆತ್ಮನಿರ್ಭರ ಕೃಷಿ ನೀತಿಯನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ. ರವಿ ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಕಲ್ಯಾಣ ನೀತಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ವಿಜ್ಞಾನ ಮತ್ತು ಕೈಗಾರಿಕೆಯ ಅಡಿಪಾಯವೂ ಕೃಷಿಯೇ ಆಗಿದೆ. ಕೃಷಿ ಇಲ್ಲದೆ ಬದುಕಿಲ್ಲ. ಸಾಫ್ಟ್‌ವೇರ್ ತಿನ್ನಲು ಅಸಾಧ್ಯ. ನೇಗಿಲನ್ನು ಮರೆತು ನಾಗರಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.

ಇತಿಹಾಸವನ್ನು ಗಮನಿಸಿದರೆ ಭಾರತವು ಕೃಷಿಯನ್ನು ಅವಲಂಬಿಸಿ ಶ್ರೀಮಂತ ರಾಷ್ಟ್ರವಾಗಿತ್ತು ಎನ್ನುವುದು ಕಾಣುತ್ತದೆ. ಆದರೆ, ಈಗ ಹೊಲ ಮಾರಾಟ ಮಾಡಿಯಾದರೂ ಕುಕ್, ಪಿಯೋನ್ ಕೆಲಸ ಪಡೆಯುವ ಪರಿಸ್ಥಿತಿ ಬಂದಿದೆ. ಸ್ವಾವಲಂಬಿ ರೈತನನ್ನು ಪರಾವಲಂಬಿ ಮಾಡಿದವರು ಯಾರು? ಸಾಲದಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ದುಸ್ಥಿತಿಗೆ ರೈತ ಯಾಕೆ ಬಂದ ಎಂದು ಪ್ರಶ್ನಿಸಿದ ಅವರು, ರಸಗೊಬ್ಬರ ವಿದೇಶದಿಂದ ತರುವ ಸ್ಥಿತಿ ಬಂದಿದೆ. ಬೀಜದ ವಿಚಾರದಲ್ಲೂ ಪರಾವಲಂಬಿತನ ಬಂದಿದೆ. ದೇಶ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಗಿದೆ. ಆದರೆ, ರೈತರು ಪರಾವಲಂಬಿಯಾಗಿದ್ದಾರೆ ಎಂದು ವಿವರಿಸಿದರು.

ಮಿತ್ರನನ್ನು ಶತ್ರುವಾಗಿ ಬಿಂಬಿಸುವ ಟೂಲ್‍ಕಿಟ್ ಪಕ್ಷದವರು ನಮ್ಮ ದೇಶದಲ್ಲಿದ್ದಾರೆ. ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಕೃಷಿಕನನ್ನು ಸಂಕಷ್ಟದಿಂದ ಪಾರು ಮಾಡಲು ಕೆಲವು ಐತಿಹಾಸಿಕ ನಿರ್ಧಾರ ಮಾಡಿದೆ. ಬೇಡಿಯನ್ನೇ ಆಭರಣ ಎಂದು ಭಾವಿಸುವ ದುಸ್ಥಿತಿ ಬಂದಿದೆ. ಬ್ಲೇಡ್ ತಯಾರಿಸುವವನು ತನ್ನ ಉತ್ಪನ್ನದ ಗರಿಷ್ಠ ಮಾರಾಟ ದರ (ಎಂಆರ್‌ಪಿ) ನಿರ್ಧರಿಸುತ್ತಾನೆ. ಆದರೆ, ಹೆಂಡತಿ ಮಕ್ಕಳೊಂದಿಗೆ ದುಡಿದ ರೈತರು ಯಾವ ಬೆಳೆಗೂ ಎಂಆರ್‌ಪಿ ನಿಗದಿ ಮಾಡುವ ಪರಿಸ್ಥಿತಿ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋಡ ಸೂರ್ಯನನ್ನು ಮರೆಮಾಚಿದರೂ ಎಷ್ಟು ಕಾಲ?: ಸಿ.ಟಿ.ರವಿ

ಪ್ರಧಾನಿ ನರೇಂದ್ರ ಮೋದಿ ಅವರು ರೈತ ಎಲ್ಲಿಯಾದರೂ ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ ಕೊಟ್ಟಿರುವುದು ಬಿಡುಗಡೆಯೇ ಅಥವಾ ಬೇಡಿಯೇ ಎಂದು ಪ್ರಶ್ನಿಸಿ ರೈತ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಡುವೆ ಕೃಷಿ ಸುಧಾರಣಾ ಮಸೂದೆ ಬಗ್ಗೆ ಜನಮಾನಸದಲ್ಲಿ ಅನುಮಾನದ ಬೀಜ ಬಿತ್ತುವ ಯತ್ನ ನಡೆದಿದೆ ಎಂದು ಟೀಕಿಸಿದರು. ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡುಗಡೆ ಮಾಡುವ ಪ್ರಧಾನಿಯವರ ನಿರ್ಧಾರದ ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಧ್ವನಿಯೆತ್ತಿ ಚಳವಳಿಗೆ ಬೆಂಬಲ ನೀಡಿದವು ಎಂದು ತಿಳಿಸಿದರು.

ರೈತರ ಬೆಳೆಗೆ ಬೆಲೆ ಖಾತರಿ ಪಡಿಸುವ ಗುತ್ತಿಗೆ ಕೃಷಿ ವಿರುದ್ಧವೂ ಅಪಪ್ರಚಾರ ನಡೆಯಿತು. ರೈತ ಸ್ವಾವಲಂಬಿ ಆಗಬಾರದೆಂಬ ಪ್ರಯತ್ನ ಈ ಷಡ್ಯಂತ್ರದ ಹಿಂದಿದೆ. ಮೂರು-ನಾಲ್ಕು ಮಾರುಕಟ್ಟೆಗಳು ಇದ್ದರೆ ರೈತರಿಗೆ ಆಯ್ಕೆ ಇರುತ್ತದೆ. ಇದು ರೈತ ವಿರೋಧಿಯೇ ಎಂದು ಕೇಳಿದರು. ಪ್ರಧಾನಿಯವರನ್ನು ಸನ್ಮಾನಿಸಬೇಕಾದವರು ಮಸೂದೆ ಹಿಂದೆಗೆತಕ್ಕೆ ಒತ್ತಾಯಿಸಿದ್ದನ್ನು ಟೀಕಿಸಿದರು. ರೈತ ಚಳವಳಿ ನೆಪದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ನಡೆಯಿತು ಎಂದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಮೋರ್ಚಾದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement