Connect with us

Chikkamagaluru

ಜಾತಿ-ಧರ್ಮ ಒಡೆದು, ಕೊಲೆ ನಡೆಯೋದೆ ಆಡಳಿತವಲ್ಲ : ಸಿದ್ದು ವಿರುದ್ಧ ಗುಡುಗಿದ ಸಿ.ಟಿ.ರವಿ

Published

on

– ನೀವೇ ಮುಸ್ಲಿಮರಿಗೆ ಟಿಕೆಟ್ ಕೊಡಬೇಕಿತ್ತು, ಯಾಕೆ ಗೆಲ್ಸೋಕೆ ಆಗಲ್ವಾ
– ವೀರಶೈವ ಲಿಂಗಾಯಿತ ಸಮಾಜ ಒಡೆಯುವ ಕೆಲಸ ಮಾಡಿದ್ದು ಯಾರು?

ಚಿಕ್ಕಮಗಳೂರು: ಸಿದ್ದರಾಮಯ್ಯನವರಿಗೆ ಆಡಳಿತ ಎಂದರೆ ಜಾತಿ-ಜಾತಿ ಒಡೆಯುವುದು. ಅವರ ಕಾಲಘಟ್ಟದಲ್ಲಿ ಕಗ್ಗೊಲೆ ಆಗುತ್ತಿತ್ತಲ್ಲಾ, ಎಷ್ಟು ಜನರ ಕೊಲೆ ಆಯ್ತು. ಆ ಕೊಲೆ ಎಲ್ಲಾ ಆಗುತ್ತಿದ್ದರೆ ಆಡಳಿತ ಅನ್ನಿಸುತ್ತೆ. ಅಂತಹಾ ಕೆಟ್ಟ ಆಡಳಿತ ಕೊಟ್ಟಂತಹಾ ಪರಿಸ್ಥಿತಿ ಇನ್ಯಾವತ್ತು ಬರಬಾರದು. ಆ ಕಾರಣಕ್ಕೆ ಜನ ಅವರನ್ನು ಸೋಲಿಸಿದ್ದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ವೀರಶೈವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿ.ಟಿ ರವಿ ಅವರು, ಯಾವುದು ಸುಳ್ಳು? ಆರ್ಟಿಕಲ್ 370 ರದ್ದು ಮಾಡಿದ್ದು ಸುಳ್ಳೋ? ರಾಮಮಂದಿರ ಕಟ್ಟಿದ್ದು ಸುಳ್ಳೋ? ಕೋವಿಡ್ ವ್ಯಾಕ್ಸಿನ್‍ನ ನೂರಾರು ದೇಶಗಳಿಗೆ ಕೊಟ್ಟು ಭಾರತ ಹೀರೋ ಆಗಿದ್ದು ಸುಳ್ಳೋ? ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದ್ದು ಸುಳ್ಳೋ? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ಹಣ ಹಾಕಿದ್ದು ಸುಳ್ಳೋ ಎಂದು ವಿರೋಧಿಗಳಿಗೆ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಉತ್ತಮ ಆಡಳಿತಕ್ಕೆ ಸಲಹೆ ನೀಡಲಿ. ಅವರ ಆಡಳಿತದ ಕೆಟ್ಟ ಆಡಳಿತವನ್ನೇ ಆಡಳಿತ ಎಂದುಕೊಂಡರೆ ಅದಕ್ಕಿಂತ ಕೆಟ್ಟ ಆಡಳಿತ ಮತ್ತೊಂದು ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದರು.

ವೀರಶೈವ ಲಿಂಗಾಯಿತ ಸಮಾಜ ಒಡೆಯುವ ಕೆಲಸ ಮಾಡಿದ್ದು ಯಾರು. ಅಂತಹಾ ಕೆಟ್ಟ ರಾಜಕಾರಣ ನಮಗೆ ಬೇಡ. ಡ್ಯೂವ್ ಹೆಸರಲ್ಲಿ ಡಿನೋಟಿಫೈ ಮಾಡಿ ಸಮರ್ಥನೆ ಮಾಡಿಕೊಂಡು ಲೋಕಾಯುಕ್ತವನ್ನು ದುರ್ಬಳಗೊಳಿಸಿ ತನ್ನ ಮೇಲೆ ಬಂದ ಆರೋಪವನ್ನು ಎಸಿಬಿ ರಚಿಸಿ ಮುಚ್ಚಿ ಹಾಕಿದಂತಹಾ ಕೆಟ್ಟ ಆಡಳಿತ ಇನ್ಯಾವತ್ತೂ ಬೇಡ. ಸಿದ್ದರಾಮಯ್ಯನವರ ಕಾಲದ್ದೇ ಅತ್ಯಂತ ಕೆಟ್ಟ ಆಡಳಿತ. ಅದಕ್ಕಿಂತ ಕೆಟ್ಟ ಆಡಳಿತವನ್ನು ಇನ್ಯಾರು ಕೊಡಲು ಸಾಧ್ಯವಿಲ್ಲ. ರುದ್ರೇಶ್ ಕೊಲೆ, ರಾಜು ಹತ್ಯೆ, ಮೂಡಬಿದರೆಯಲ್ಲಿ ನಡೆದ ಪ್ರಶಾಂತ್ ಪೂಜಾರಿ ಹತ್ಯೆ ಎಲ್ಲವೂ ಸಿದ್ದರಾಮಯ್ಯನವರ ಕಾಲದಲ್ಲೇ ಆಗಿದ್ದು. 46 ಜನರ ಹತ್ಯೆಯಾಯಿತು. ಅಂತಹಾ ಕೆಟ್ಟ ಆಡಳಿತ ನಮಗೆ ಕನಸು-ಮನಸಿನಲ್ಲಿಯೂ ಬೇಡ ಎಂದರು.

ಸಾರಿಗೆ ನೌಕರರ ಬೆನ್ನಿಗೆ ನಿಂತ ರವಿ :
ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಾರಿಗೆ ನೌಕರರ ಬೆನ್ನಿಗೆ ನಿಂತಿದ್ದಾರೆ. ನೀವು ಯಾರ ರಾಜಕೀಯದ ದಾಳ ಆಗಬೇಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ಮೇ 2ರವರೆಗೆ ಸಮಯ ಕೇಳಿದೆ. ಅಲ್ಲಿವರೆಗೆ ಸರ್ಕಾರಕ್ಕೆ ಅವಕಾಶ ನೀಡಿ. ಆಮೇಲೂ ನಿಮ್ಮ ಬೇಡಿಕೆ ಈಡೇರದಿದ್ದರೆ ನಾವು ಧ್ವನಿ ಎತ್ತುತ್ತೇವೆ ಸರ್ಕಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ನಷ್ಟದಲ್ಲಿರುವ ಸಾರಿಗೆ ನಿಗಮಗಳು ಕೋವಿಡ್‍ನಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿವೆ. ಕೋವಿಡ್ ಕಾಲದ ಪರಿಸ್ಥಿತಿಯನ್ನು ಅವಲೋಕಿಸುವಂತೆ ಮನವಿ ಮಾಡಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಹಠಮಾರಿ ಧೋರಣೆ ತೋರಿದರೆ ಅದರ ಪರಿಣಾಮ ಸಾಮಾನ್ಯ ನೌಕರರ ಮೇಲಾಗುತ್ತೆ, ಸಾರಿಗೆ ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದ್ದರೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂದರು.

ಜಮೀರ್ ಅಹಮದ್‍ಗೆ ಸಿ.ಟಿ.ರವಿ ಟಾಂಗ್ :
ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯವರಿಂದ 10 ಕೋಟಿ ಹಣ ಪಡೆದು ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿರೋ ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಅವರ ಹೇಳಿಕೆಗೆ ಸಿ.ಟಿ.ರವಿ ಅವರು ಟಾಂಗ್ ನೀಡಿದ್ದು, ಕಾಂಗ್ರೆಸ್ ನವರು ಮಾಡೋದನ್ನು ಜಮೀರ್ ಹೇಳುತ್ತಿದ್ದಾರೆ. ಅವರೇ ಮುಸ್ಲಿಮರಿಗೆ ಟಿಕೆಟ್ ಕೊಡಬೇಕಿತ್ತು. ಅವರು ಜಾತ್ಯಾತೀತ ಚಾಂಪಿಯನ್ ಅಲ್ವಾ. ಯಾಕೆ ಕೊಡಲಿಲ್ಲ. ಯಾಕೆ ಗೆಲ್ಲಿಸಲು ಆಗಲ್ವಾ ಎಂದು ವ್ಯಂಗ್ಯವಾಡಿದ್ದಾರೆ. ಮುಸ್ಲಿಂ ಅಂದ್ರೆ ಜಮೀರ್ ಖಾನ್ ಒಬ್ಬರೇನಾ ಮುಂದಕ್ಕೆ ಚಿಕ್ಕಮಗಳೂರಿಗೆ ಮುಸ್ಲಿಮರಿಗೆ ಟಿಕೆಟ್ ಕೊಡಲಿ, ಅವರ ಜಾತ್ಯಾತೀತತೆ ಹಾಗೂ ಚಾಂಪಿಯನ್‍ಶಿಪ್ ತೋರಿಸಲು ಚಿಕ್ಕಮಗಳೂರಿಗೆ ಟಿಕಟ್ ಕೊಡಲಿ ಯಾರು ಬೇಡ ಎಂದು ಪ್ರಶ್ನಿಸಿದರು. ಇವರು ಏನೇ ಮಾಡಿದರೂ ಜನ ನಮಗೆ ಮತ ನೀಡುತ್ತಾರೆ. ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

Click to comment

Leave a Reply

Your email address will not be published. Required fields are marked *