Chikkamagaluru
ವೆಸ್ಟ್ ಎಂಡ್ ವಿಳಾಸ ಗೊತ್ತಿಲ್ದೆ ಲೋಕಸಭಾ ಚುನಾವಣೆ ಒಟ್ಟಿಗೆ ಮಾಡಿದ್ರಾ- ಸಿದ್ದುಗೆ ರವಿ ಪ್ರಶ್ನೆ

– ಕೈಗೆಟುಕದ ದ್ರಾಕ್ಷಿ ಹುಳಿ-ನರಿ ಕಥೆ ಹೇಳಿದ್ರೆ ಯಾರ್ ಕೇಳ್ತಾರೆ
– ಬಿಜೆಪಿ, ಜೆಡಿಎಸ್ ಒಳಒಪ್ಪಂದ ಮಾಡ್ಕೊಂಡಿದ್ರೆ ಬಾದಾಮಿಲೂ ಗೆಲ್ಲುತ್ತಿರಲಿಲ್ಲ
ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಿದ್ದಾರೆ, ತಾಜ್ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆ ತಾನೇ ಲೋಕಸಭೆ ಚುನಾವಣೆ ಒಟ್ಟಿಗೆ ಮಾಡಿದ್ದು, ಅಧಿಕಾರ ಹಂಚಿಕೊಂಡು ತನ್ನವರನ್ನ ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ವಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹಳೇ ಮಾತಿಗೂ ಈಗಿನ ಮಾತಿಗೂ ತುಂಬಾ ವ್ಯಾತ್ಯಾಸವಿದೆ. ಯಾಕೆ ಅರುಳು-ಮರುಳಾ, ಘಳಿಗೆಗೊಮ್ಮೆ ಬಣ್ಣ ಬದಲಿಸಿದರೆ ನಮ್ಮ ಕಡೆ ಗೋಸುಂಬೆ ಅಂತಾರೆ. ಸಿದ್ದರಾಮಯ್ಯನವರು ಗೋಸುಂಬೆ ರೀತಿ ಆಡಬಾರದು. ನಾವು ಸ್ಪಷ್ಟವಾಗಿದ್ದೇವೆ. ಎಂದಿಗೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅಂದು ಜೆಡಿಎಸ್ ಜೊತೆ ನಿಂತು ಬೆಂಬಲಿಸಿದವರು ಯಾರೆಂದು ಪ್ರಶ್ನಿಸಿದ್ದಾರೆ.
ಎರಡೂವರೆ ವರ್ಷಗಳ ಬಳಿಕ ಸಿದ್ದರಾಮಯ್ಯ ತಮ್ಮ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಒಮ್ಮೆ ಉಗಿದದ್ದನ್ನ ಯಾರೂ ಬಾಯಿಗೆ ಹಾಕಿಕೊಳ್ಳುವುದಿಲ್ಲ. ತನ್ನನ್ನ ಸೋಲಿಸಿದವರ ಜೊತೆಯೇ ಸರ್ಕಾರ ಮಾಡಿದ್ದರು. ಚಾಕಲೇಟ್ ಇರಲಿ ಮತ್ತೊಂದು ಇರಲಿ, ಮಕ್ಕಳು ಕೂಡ ಉಗಿದದ್ದನ್ನ ಬಾಯಿಗೆ ಹಾಕಿಕೊಳ್ಳುವುದಿಲ್ಲ. ನೀವು ಯಾಕೆ ಬಾಯಿಗೆ ಹಾಕಿಕೊಂಡಿರಿ. ಆವತ್ತು ಎಲ್ಲಾ ಮಾಡಿ ಈಗ ಕೈಗೆಟುಕದ ದ್ರಾಕ್ಷಿ ಹುಳಿ ಎಂದು ನರಿ ಕಥೆ ಹೇಳಿದರೆ ಯಾರು ಕೇಳ್ತಾರೆ. ಸೋಲಿನ ಬಗ್ಗೆ ಕಾರಣ ಗೊತ್ತಿತ್ತು, ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ ಎಂದು ಪ್ರಶ್ನಿಸಿದರು.
ನಮಗೆ ಜನಾಭಿಪ್ರಾಯ ಬಂದಿಲ್ಲ. ವಿರೋಧ ಪಕ್ಷದಲ್ಲಿ ಇರುತ್ತೇವೆಂದು ವಿರೋಧ ಪಕ್ಷದಲ್ಲಿ ಕೂತು, ರಾಜ ಮರ್ಯಾದೆಯ ರಾಜಗೌರವ ಹುಡುಕಬೇಕಿತ್ತು. ಜೆಡಿಎಸ್ ಜೊತೆ ಯಾಕೆ ಸರ್ಕಾರ ಮಾಡಿದರು, ಬಿಜೆಪಿ ಅಧಿಕಾರದಿಂದ ದೂರ ಇಡಬೇಕೆಂದು ಒಟ್ಟಾದರು. ಯಾವ ಮುಖ ಇಟ್ಟುಕೊಂಡು ಒಪ್ಪಿಕೊಂಡರು, ಸಿದ್ದರಾಮಯ್ಯನವರದ್ದು ನೈತಿಕ ರಾಜಕಾರಣನಾ ಎಂದು ವ್ಯಂಗ್ಯವಾಡಿದರು.
ಬಿಜೆಪಿ-ಜೆಡಿಎಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿಯಲ್ಲೂ ನೀವು ಗೆಲ್ಲುತ್ತಿರಲಿಲ್ಲ. ಬಾದಾಮಿಯಲ್ಲಿ ನೀವು ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ಮತಗಳಿಂದ. ಅದು ಮುಖ್ಯಮಂತ್ರಿ ಆದವರಿಗೆ ಗೌರವ ತರುವ ಗೆಲುವೇ ಅಲ್ಲ. ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಆದರೆ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ರೆ ಬಾದಾಮಿಯಲ್ಲೂ ನೀವು ಸೋಲಬೇಕಿತ್ತು ಎಂದು ಕುಟುಕಿದ್ದಾರೆ.
