ರಾಯಚೂರು: ಜಿಲ್ಲೆಯ ಕೆಲ ಗ್ರಾಮಗಳ ಜನರ ಪಾಡು ಮಳೆಬಂದರೂ ಕಷ್ಟ, ಬರದಿದ್ದರೆ ನಷ್ಟ ಎನ್ನುವಂತಾಗಿದೆ. ಹಿಂದೆ ಮಳೆಯಿಲ್ಲದೆ ಆಹಾರ ಅರಸಿ ಜಮೀನುಗಳಿಗೆ ನುಗ್ಗುತ್ತಿದ್ದ ಮೊಸಳೆಗಳು ಈಗ ಮಳೆ ಬಂದು ನದಿಯಲ್ಲಿ ನೀರು ಹೆಚ್ಚಾದ ಕಾರಣಕ್ಕೆ ಹೊಲಗಳಿಗೆ ನುಗ್ಗುತ್ತಿರುವುದು ರೈತನಿಗೆ ತಲೆನೋವಾಗಿದೆ.
ರಾಯಚೂರಿನ ಲಿಂಗಸುಗೂರಿನ ಬೋಗಾಪುರದ ಕೆರೆಯು ಮಳೆಗೆ ತುಂಬಿರುವ ಕಾರಣಕ್ಕೆ ಅದರಲ್ಲಿದ್ದ ಮೊಸಳೆಯೊಂದು ಜಮೀನೊಂದಕ್ಕೆ ನುಗ್ಗಿ, ರಾಜಾರೋಷವಾಗಿ ಓಡಾಡಿಕೊಂಡಿತ್ತು. ಬಳಿಕ ಜನರು ಅತ್ತ ಬಂದ ಕೂಡಲೇ ಅವರನ್ನು ನೋಡಿ ಮತ್ತೆ ಮೊಸಳೆ ಕೆರೆಯ ನೀರನ್ನು ಸೇರಿದೆ.
ಮೊಸಳೆ ಜಮೀನಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಮತ್ತೆ ಮೊಸಳೆ ಜಮೀನುಗಳಿಗೆ ನುಗ್ಗುವ ಸಾಧ್ಯತೆ ಇರುವ ಕಾರಣಕ್ಕೆ ಕೆರೆಯ ಸುತ್ತ ಮುತ್ತಲಿನ ರೈತರು ಜಮೀನಿಗೆ ಹೋಗಲು ಹೆದರುತ್ತಿದ್ದಾರೆ.
ಈ ಹಿಂದೆ ಕೂಡ ಆಹಾರ ಅರಸಿ ಹಲವಾರು ಬಾರಿ ಮೊಸಳೆಗಳು ಜಮೀನುಗಳಿಗೆ ನುಗ್ಗಿದ್ದವು. ಆಗ ಗ್ರಾಮಸ್ಥರು ಅವುಗಳನ್ನು ಧೈರ್ಯದಿಂದ ಹಿಡಿದು ಅರಣ್ಯ ಇಲಾಖೆಗಳಿಗೆ ಒಪ್ಪಿಸಿರುವ ಪ್ರಕರಣಗಳು ಕೂಡ ಇವೆ. ಸದ್ಯ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ರೈತರಲ್ಲಿ ಆತಂಕ ಸೃಷ್ಟಿಸಿದೆ.