Saturday, 14th December 2019

ಜಿಲ್ಲೆಯಾದ್ಯಂತ ಕ್ರಿಕೆಟ್ ಅಭಿಮಾನಿಗಳಿಂದ ವಿಶೇಷ ಪೂಜೆ

– ದರ್ಗಾದಲ್ಲೂ ಸ್ಪೆಷಲ್ ಪ್ರಾರ್ಥನೆ

ಬೆಂಗಳೂರು: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡಿಯಾ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಲಿ ಎಂದು ಕ್ರಿಕೆಟ್ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾಭಿಮಾನಿಗಳು ಕ್ರೀಡಾಂಗಣದಲ್ಲಿ ವಿಕೆಟ್ ಮತ್ತು ಬ್ಯಾಟ್ ಗಳಿಗೆ ಪೂಜೆ ಸಲ್ಲಿಸಿ ಭಾರತ ತಂಡ ಗೆದ್ದು ಬರಲಿ ಎಂದು ಜಯಕಾರ ಕೂಗಿದ್ದಾರೆ. ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ಧ ಈ ಹಿಂದೆ ನಡೆದಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಜಯಗಳಿಸಿದೆ. ಈ ಬಾರಿಯೂ ಸಹ ಗೆದ್ದು ಇತಿಹಾಸ ನಿರ್ಮಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಜೊತೆಗೆ ಬ್ಯಾಟ್ ಮತ್ತು ಚೆಂಡಿಗೂ ಪೂಜೆ ಸಲ್ಲಿಸಿ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.

ಭಾರತ ಪಾಕಿಸ್ತಾನ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ನಗರದ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬ್ಯಾಟ್ ಹಾಗೂ ಚೆಂಡಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲುವು ಸಾಧಿಸಲಿ ಎಂದು ಕ್ರಿಕೆಟ್ ಅಭಿಮಾನಿಗಳು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಾರ್ಥಿಸಿದ್ದಾರೆ.

ಹುಬ್ಬಳ್ಳಿಯ ಫತೆಷಾವಲಿ ದರ್ಗಾದಲ್ಲಿ ಮುಸಲ್ಮಾನರು ಕೂಡ ಕ್ರಿಕೆಟ್‍ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಹಳೇ ಹುಬ್ಬಳ್ಳಿಯ ಇಂಡಿಪಂಪ್ ನಲ್ಲಿ ಇರುವ ಫತೆಶಾವಲಿ ದರ್ಗಾದಲ್ಲಿ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ಧ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.

ಇತ್ತ ಕಲಬುರಗಿ ನಗರದ ಶಾಹಬಜಾರ ಲಾಲ್ ಹನುಮಾನ್ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗಿದೆ. ಜೈ ಹೋ ಟೀಂ ಇಂಡಿಯಾ ಎಂದು ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಟೀಂಗೆ ಶುಭ ಕೋರಿದ್ದಾರೆ.

ಗದುಗಿನ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಶಾಲಾ ಮಕ್ಕಳು ಭಾರತದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಲಿಂಗೈಕ್ಯ, ಪಂಡಿತ್ ಪುಟ್ಟರಾಜ್ ಗವಾಯಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಾಡಿ, ಗೆಲ್ಲಲಿ ಗೆಲ್ಲಲಿ…ಇಂಡಿಯಾ ಗೆಲ್ಲಲಿ, ಜೀತೆಗಾ ಜೀತೇಗಾ… ಇಂಡಿಯಾ ಜೀತೆಗಾ ಎಂದು ಗದಗ್‍ನ ಪುಣ್ಯಾಶ್ರಮದ ಶಾಲಾ ಮಕ್ಕಳು ಘೋಷಣೆ ಕೂಗಿದ್ದಾರೆ.

Leave a Reply

Your email address will not be published. Required fields are marked *