Connect with us

Cricket

ಕ್ರಿಕೆಟ್ ಡಿಪಿಎಲ್ 2021: ಸಿಂಧನೂರಿನ ಸಣ್ಣ ಮಾರೇಶ್ ಆಯ್ಕೆ

Published

on

– ಫೆ.13 ರಿಂದ ಶಾರ್ಜಾದಲ್ಲಿ ಕ್ರಿಕೆಟ್ ಪಂದ್ಯಾವಳಿ

ರಾಯಚೂರು: ಶಾರ್ಜಾ ಕ್ರೀಡಾಂಗಣದಲ್ಲಿ ಫೆಬ್ರವರಿ 13 ರಿಂದ ನಡೆಯಲಿರುವ ದಿವ್ಯಾಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲೆಯ ಸಿಂಧನೂರಿನ ಕ್ರಿಕೆಟ್ ಪ್ರತಿಭೆ ಸಣ್ಣಮಾರೇಶ್ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, ಸಣ್ಣಮಾರೇಶ್ ಮುಂಬೈ ಐಡಿಯಲ್ಸ್ ತಂಡದಲ್ಲಿ ಬೌಲರ್ ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ಒಟ್ಟು ನಾಲ್ಕು ಜನ ಆಯ್ಕೆಯಾಗಿದ್ದು ನಾಲ್ಕು ಜನ ಮುಂಬೈ ಐಡಿಯಲ್ಸ್ ಪರ ಆಡಲಿದ್ದಾರೆ.

ಚೆನ್ನೈ ಸೂಪರ್ ಸ್ಟಾರ್ ,ಮುಂಬೈ ಐಡಿಯಲ್ಸ್, ಕೊಲ್ಕತ್ತಾ ನೈಟ್ ಫೈಟರ್ಸ್ ,ಡೆಲ್ಲಿ ಚಾಲೆಂಜರ್ಸ್, ರಾಜಸ್ಥಾನ್ ರಾಜವಾಡೆ, ಗುಜರಾತ್ ಹಿಟ್ಟರ್ಸ್ ಒಟ್ಟು ಆರು ತಂಡಗಳು ಯುಎಇ ನ ಶಾರ್ಜಾದಲ್ಲಿ ನಡೆಯಲಿರುವ ದಿವ್ಯಾಂಗ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಲಿವೆ. ಮಹಿಳೆಯರ ಐಪಿಎಲ್ ಬಳಿಕ ದಿವ್ಯಾಂಗ ಕ್ರಿಕೆಟ್ ಪಟುಗಳಿಗಾಗಿ ಡಿಪಿಎಲ್ ಆಯೋಜಿಸಲಾಗಿದೆ. 2019 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತರಾಷ್ಟ್ರೀಯ 20-20 ಪಂದ್ಯಾವಳಿಯಲ್ಲಿ ಸಣ್ಣಮಾರೇಶ್ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ಎರಡು ಅಂತರರಾಷ್ಟ್ರೀಯ ಪಂದ್ಯಾವಳಿಯಿಂದ ದೂರ ಉಳಿದಿದ್ದರು. 37 ರಣಜಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಆಲ್ ರೌಂಡರ್ ಸಣ್ಣಮಾರೇಶ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಸಿಂಧನೂರು ತಾಲೂಕಿನ ಅರಳಹಳ್ಳಿ ಗ್ರಾಮದ ಸಣ್ಣಮಾರೇಶ್ ಚಿಕ್ಕವಯಸ್ಸಿನಲ್ಲಿ ಹಿಟ್ಟಿನ ಗಿರಣಿಯಲ್ಲಿ ನಡೆದ ಆಕಸ್ಮಿಕ ಅವಘಡದಲ್ಲಿ ತಮ್ಮ ಎಡಗೈ ಕಳೆದುಕೊಂಡಿದ್ದಾರೆ. ವಿಕಲಚೇತನರಾದರೂ ಅಚಲವಾದ ಛಲದಿಂದ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಕಲಚೇತನರಿಗಾಗಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗಿಟ್ಟಿಸಿಕೊಂಡ ಮಾರೇಶ್ ಓಟ ಸ್ಪರ್ಧೆಯಲ್ಲಿ ಸಾಕಷ್ಟು ನಿಪುಣರಾಗಿದ್ದರು. ಓಟದ ಜೊತೆ ಕ್ರಿಕೆಟ್ ಸಹ ಆಡುತ್ತಿದ್ದ ಸಣ್ಣಮಾರೇಶ್ 2013ರಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತರ್ ರಾಜ್ಯ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾದರು, ಅಲ್ಲಿ ಒಂಟಿ ಕೈಯಲ್ಲೇ ಬ್ಯಾಟ್ ಹಿಡಿದು ತಮ್ಮ ಚಮತ್ಕಾರ ತೋರಿಸಿದರು. ಬಳಿಕ ಕ್ರಿಕೆಟಿನಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ ಬಂದಿದ್ದಾರೆ.

ವಿಕಲಚೇತನರ ವಿವಿಧ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಆಲ್ ರೌಂಡರ್ ಆಗಿ ತಂಡವನ್ನು ವಿಜಯದತ್ತ ಕೊಂಡೊಯ್ದಿದ್ದಾರೆ. ಮಂಗಳೂರಿನ ಎಂಆರ್ ಪಿಎಲ್ ಕಂಪನಿಯ ಉದ್ಯೋಗಿಯಾಗಿರುವ ಸಣ್ಣಮಾರೇಶ್ ಈಗ ಡಿಪಿಎಲ್‍ಗೆ ಆಯ್ಕೆಯಾಗಿದ್ದು ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಫೆ.13 ರಿಂದ ಶಾರ್ಜಾದಲ್ಲಿ 8 ದಿನ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

Click to comment

Leave a Reply

Your email address will not be published. Required fields are marked *