Recent News

ಮೊಬೈಲ್ ಸ್ಫೋಟಗೊಂಡು ಸಿಇಒ ಸ್ಥಳದಲ್ಲೇ ಸಾವು!

ಕೌಲಾಲಾಂಪುರ: ಚಾರ್ಜ್ ಇಟ್ಟಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಮಲೇಷಿಯಾದ ಕ್ರಾಡಲ್ ಫಂಡ್ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಜೀರ್ ಹಸನ್(45) ಮೃತಪಟ್ಟ ಸಿಇಒ. ಎಂದಿನಂತೆ ಮನೆಯಲ್ಲಿ ಚಾರ್ಜ್ ಗೆ ಇಟ್ಟು ಮಲಗಿದ್ದಾಗ ಮೊಬೈಲ್ ಸ್ಫೋಟಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವರದಿಗಳ ಪ್ರಕಾರ ನಜೀರ್ ಹಸನ್‍ರವರು ತಮ್ಮ ಎರಡು ಸ್ಮಾರ್ಟ್‍ಫೋನ್‍ಗಳನ್ನು ರಾತ್ರಿ ಮಲಗುವ ವೇಳೆ ತಮ್ಮ ಹಾಸಿಗೆಯ ಪಕ್ಕದಲ್ಲೇ ಚಾರ್ಜ್‍ಗೆ ಇಟ್ಟಿದ್ದಾರೆ. ಈ ವೇಳೆ ಇದರಲ್ಲಿ ಒಂದು ಫೋನ್ ಸ್ಫೋಟಗೊಂಡು ಕೊಠಡಿ ತುಂಬಾ ಬೆಂಕಿ ಆವರಿಸಿಕೊಂಡು ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಸಂಬಂಧಿಗಳು, ಹಸನ್‍ರವರು ಬ್ಲಾಕ್ ಬೆರ್ರಿ ಮತ್ತು ಹುವಾವೇ ಕಂಪನಿಯ ಎರಡು ಫೋನ್‍ಗಳನ್ನು ಬಳಸುತ್ತಿದ್ದರು. ಮೊಬೈಲ್ ಸ್ಫೋಟಗೊಂಡು ತಲೆಗೆ ಗಂಭೀರಗಾಯವಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ಫೋಟಗೊಂಡಿರುವ ಮೊಬೈಲ್‍ನಲ್ಲಿ ಯಾವ ಫೋನ್ ಸ್ಫೋಟಗೊಂಡಿದೆ ಎಂಬುದು ತಿಳಿದು ಬಂದಿಲ್ಲ, ಹಸನ್‍ರವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದು, ಕೆಲಸದ ನಿಮಿತ್ತ ಅವರಿಂದ ದೂರವಾಗಿದ್ದರು ಎಂದು ತಿಳಿಸಿದ್ದಾರೆ.

ಪ್ರಕರಣ ಕುರಿತು ಹೇಳಿಕೆ ನೀಡಿದ ಮಲೇಷಿಯಾ ಪೊಲೀಸರು, ವ್ಯಕ್ತಿ ಮೊಬೈಲ್ ಚಾರ್ಜಿಂಗ್ ಇಟ್ಟಿದ್ದ ವೇಳೆ ಸ್ಫೋಟಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೊಬೈಲ್ ಸ್ಫೋಟದಿಂದ ಉಂಟಾದ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ ಎಂದು ವರದಿ ಬಂದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *