Connect with us

Bengaluru City

ಕಾಂಗ್ರೆಸ್ ವತಿಯಿಂದ ರಾಜ್ಯದಲ್ಲಿ ಕೋವಿಡ್ ಡೆತ್ ಆಡಿಟ್ ಅಭಿಯಾನ ಡಿಕೆಶಿ

Published

on

Share this

ಬೆಂಗಳೂರು: ಕೋವಿಡ್ ನಿಂದಾಗಿ ಸಾವು-ನೋವು ಉಂಡವರು, ಉದ್ಯೋಗ, ಆರೋಗ್ಯ ಕಳೆದುಕೊಂಡವರು, ಆರ್ಥಿಕವಾಗಿ ಸಂಕಷ್ಟಕ್ಕೀಡಾದ ರೈತರು, ಕಾರ್ಮಿಕರು, ವರ್ತಕರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿ, ಅವರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ 30 ದಿನಗಳ ಅಭಿಯಾನ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಸರ್ಕಾರ ಏನು ಮಾಡಿತು ಎಂಬುದು ಬಹಳ ಮುಖ್ಯ. ದೇಶ ಹಾಗೂ ರಾಜ್ಯದಲ್ಲಿ ಸಂಕಷ್ಟಕ್ಕೀಡಾದವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿತ್ತು. 20 ಲಕ್ಷ ಕೋಟಿ ಪ್ಯಾಕೇಜ್ ನಿಂದ ಯಾರಿಗೆ ಅನುಕೂಲವಾಯಿತು ಎಂದು ಕೇಳಿದರೂ ಮಾಹಿತಿ ಕೊಡಲಿಲ್ಲ. ರಾಜ್ಯ ಸರ್ಕಾರದ ಪ್ಯಾಕೇಜ್ ಬಗ್ಗೆಯೂ ಯಾವುದೇ ಮಾಹಿತಿ ಸಿಗಲಿಲ್ಲ.

ಕೋವಿಡ್ ನಿಂದ ಸತ್ತವರ ಆಡಿಟ್ ಮಾಡಿ ಎಂದು ಕೇಳಿದರೂ ಆ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ. ಕೇವಲ ಸೀಮಿತ ಮಾನದಂಡಗಳನ್ನು ಇಟ್ಟುಕೊಂಡು, ಕೆಲವರಿಗೆ ಮಾತ್ರ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿತು. ಇನ್ನು ಕೇಂದ್ರ ಸರ್ಕಾರ 4 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿ, 8 ತಾಸುಗಳಲ್ಲಿ ಅದನ್ನು ಹಿಂಪಡೆದಿದೆ. ಆಕ್ಸಿಜನ್ ಕೊರತೆ, ಹಾಸಿಗೆ ಸಿಗದೆ, ಚಿಕಿತ್ಸೆ ಸಿಗದೇ ಸತ್ತವರ ಸಂಖ್ಯೆ ಸರ್ಕಾರ ಕೊಟ್ಟಿರುವ ಅಂಕಿ-ಅಂಶಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಡೆತ್ ಆಡಿಟ್ ಮಾಡುವುದಾಗಿ ಸಿಎಂ ಹೇಳಿಕೆ ಕೊಟ್ಟರೂ, ಆ ಸಂಬಂಧ ಆದೇಶ ಹೊರಡಿಸಲಿಲ್ಲ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಯಾರು ಕೋವಿಡ್ ನಿಂದ ನೊಂದಿದ್ದಾರೆ, ಬೆಂದಿದ್ದಾರೆ, ಜೀವ, ಜೀವನ ಕಳೆದುಕೊಂಡಿದ್ದಾರೆ, ಅವರನ್ನು ತಲುಪಲು ಪಕ್ಷ ಅಭಿಯಾನ ಹಮ್ಮಿಕೊಂಡಿದೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ರಾಷ್ಟ್ರ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಅಭಿಯಾನ ಹಮ್ಮಿಕೊಂಡು, ನಮಗೂ ಮಾರ್ಗದರ್ಶನ ನೀಡಿದೆ.

ನಮ್ಮ ಎಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರು, ಸೋತವರ ಜತೆ ಈ ಮಾಹಿತಿ ಹಂಚಿಕೊಳ್ಳುತ್ತೇವೆ. ಕೋವಿಡ್ ನಿಂದ ಪ್ರಾಣ, ಉದ್ಯೋಗ ಕಳೆದುಕೊಂಡು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರ ಬಗ್ಗೆ ಮಾಹಿತಿ ಕಲೆಹಾಕಿ, ಅವರಿಗೆ ಮಾನಸಿಕವಾಗಿ ಶಕ್ತಿ ತುಂಬಲು ಈ ಕಾರ್ಯಕ್ರಮ ರೂಪಿಸಲಾಗಿದೆ.

ಪಂಚಾಯಿತಿಯಿಂದ ಪಾರ್ಲಿಮೆಂಟ್ ಕ್ಷೇತ್ರದವರೆಗೂ, ಬ್ಲಾಕ್ ಮಟ್ಟದಿಂದ ಟೌನ್ ಗಳವರೆಗೆ ಕೋವಿಡ್ ವಾರಿಯರ್ ಗಳನ್ನು ನೇಮಕ ಮಾಡಿ, ಸ್ಥಳೀಯ ನಾಯಕರ ಮುಂದಾಳತ್ವದಲ್ಲಿ ತಂಡ ರಚಿಸಿ ಕನಿಷ್ಠ 200 ಕುಟುಂಬಗಳನ್ನು ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳುವ ಗುರಿ ಹೊಂದಲಾಗಿದೆ. ಕೋವಿಡ್ ನಿಂದ ಆ ಕುಟುಂಬ ಏನೆಲ್ಲಾ ಸಂಕಷ್ಟ ಅನುಭವಿಸಿದೆ, ನಾವು ಅವರಿಗೆ ಹೇಗೆ ನೆರವಾಗಬಹುದು, ಸರ್ಕಾರದ ಮೇಲೆ ಒತ್ತಡ ಹಾಕಿ ಏನೆಲ್ಲ ನೆರವು ಕೊಡಿಸಬಹುದು ಎಂಬ ಮಾಹಿತಿ ಪಡೆಯಲಾಗುವುದು.

ತಮ್ಮ ಮನೆಯಲ್ಲಿ ಯಾರಾದರೂ ಸೋಂಕಿತರಾಗಿದ್ದಾರಾ? ಸೋಂಕಿನಿಂದ ಸತ್ತಿದ್ದಾರಾ? ಸತ್ತಿದ್ದರೆ ಅವರ ಹೆಸರು ಹಾಗೂ ವಯಸ್ಸು ಏನು? ಮೃತಪಟ್ಟವರು ಮನೆಯಲ್ಲಿ ದುಡಿಯುವ ವ್ಯಕ್ತಿಯಾಗಿದ್ದರಾ? ಕುಟುಂಬದಲ್ಲಿ ಕೋವಿಡ್/ ಲಾಕ್ ಡೌನ್ ನಿಂದ ಯಾರಾದರೂ ಉದ್ಯೋಗ ಕಳೆದುಕೊಂಡಿದ್ದಾರಾ? ಉದ್ಯೋಗ ಕಳೆದುಕೊಂಡಿದ್ದರೆ ಅವರ ಹೆಸರು ಹಾಗೂ ವಯಸ್ಸು? ಆ ಕುಟುಂಬಕ್ಕೆ ಅಗತ್ಯವಾಗಿರುವ ನೆರವು (ದಿನಸಿ, ಉದ್ಯೋಗ, ಶಿಕ್ಷಣ, ಆರ್ಥಿಕ ನೆರವು) ಏನು? ಎಂಬ ಮಾಹಿತಿ ಕಲೆಹಾಕಿ ಅದನ್ನು ಕೆಪಿಸಿಸಿಗೆ ಕಳುಹಿಸಿಕೊಡಬೇಕು. ನಂತರ ಅದನ್ನು ಎಐಸಿಸಿಗೆ ರವಾನಿಸಲಾಗುವುದು.

ಸರ್ಕಾರದ ಪರಿಹಾರ ಪಡೆಯಲು ನೋಂದಣಿ ಮಾಡಿಸಿಕೊಳ್ಳುವ ದಿನಾಂಕವನ್ನು ಸರ್ಕಾರ 30ನೇ ತಾರೀಖಿನವರೆಗೆ ವಿಸ್ತರಿಸಿದ್ದು, ಹೀಗಾಗಿ ನಮ್ಮ ಕಾರ್ಯಕರ್ತರು ಎಲ್ಲ ವರ್ಗದವರ ಮಾಹಿತಿ ಪಡೆದು, ಅವರು ಪರಿಹಾರ ಪಡೆಯಲು ನೋಂದಣಿ ಮಾಡಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

ಜುಲೈ 1 ರಿಂದ 30 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ನಮ್ಮ ನಾಯಕರು, ಪದಾಧಿಕಾರಿಗಳು ಪ್ರತಿ ಬ್ಲಾಕ್ ನಲ್ಲಿ ಕನಿಷ್ಠ 10 ಜನರ ತಂಡ ರಚಿಸಿ, ಜನರ ಧ್ವನಿಯಾಗಿ ಅವರ ಬೆನ್ನಿಗೆ ನಿಲ್ಲಬೇಕು. ಭವಿಷ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನ್ಯಾಯವಾಗಿರುವ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಈಗ ಸದ್ಯದ ಮಟ್ಟಿಗೆ ಅವರಿಗೆ ನಮ್ಮ ಕೈಲಾದ ನೆರವು ನೀಡುತ್ತೇವೆ.

1.20 ಲಕ್ಷ ಮರಣ ಪ್ರಮಾಣ ಪತ್ರ:
ಕೋವಿಡ್ ನಿಂದ ಸತ್ತವರ ಸಂಖ್ಯೆ 30 ಸಾವಿರ ಎಂದು ಸರ್ಕಾರ ಹೇಳುತ್ತಿದೆ. ಆದರೆ ರಾಜ್ಯದಲ್ಲಿ 1.20 ಲಕ್ಷ ಮರಣ ಪ್ರಮಾಣ ಪತ್ರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರದಲ್ಲಿ ಸಾವಿನ ಕಾರಣ ಹೇಳುವುದಿಲ್ಲ. ಹೀಗಾಗಿ ಅವರಿಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿ ಜನರಲ್ಲಿ ತಿಳುವಳಿಕೆ ಮೂಡಿಸಿ, ಕೋವಿಡ್ ನಿಂದ ಸತ್ತಿರುವ ಎಲ್ಲರಿಗೂ ಪ್ರಮಾಣಪತ್ರ ಕೊಡಿಸಿ, ಪರಿಹಾರ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ. ಕೋವಿಡ್ ನಿಂದ ಸತ್ತರೆ ಬೇರೆ ಕಾರಣದ ಸಾವು ಎಂದು ಘೋಷಣೆ ಮಾಡಿರುವ ಉದಾಹರಣೆಗಳು ಇವೆ. ಹೀಗಾಗಿ ಕೋವಿಡ್ ನಿಂದ ಸತ್ತವರ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರ ಸಮೀಕ್ಷೆ ನಡೆಸಿ, ಪರಿಹಾರ ನೀಡಲು ಹಿಂದೇಟು ಹಾಕಿದೆ. ಹೀಗಾಗಿ ಕಾಂಗ್ರೆಸ್ ಕೋವಿಡ್ ವಾರಿಯರ್ಸ್ ಮನೆ, ಮನೆಗೂ ಹೋಗಿ ಅವರಿಗೆ ನೆರವಾಗಲಿದೆ.

ನಮ್ಮ ಹೋರಾಟ, ಬಿಜೆಪಿಯವರ ಪ್ರಚಾರ:
ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಹೋರಾಟ ಮಾಡಿತು. ನಾವು ಶಾಸಕರ ನಿಧಿಯಿಂದ 100 ಕೋಟಿ ಬಳಸಿಕೊಂಡು ಉಚಿತ ಲಸಿಕೆ ನೀಡುತ್ತೇವೆ ಎಂದು ಹೇಳಿದೆವು. ಆದರೆ ಅನುಮತಿ ನೀಡಲಿಲ್ಲ. ರಾಜ್ಯಪಾಲರನ್ನು ಭೇಟಿಯಾಗಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಬರೆದೆವು. ನಂತರ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಲಸಿಕೆ ನೀಡುವಂತೆ ಚಾಟಿ ಬೀಸಿದವು. ಆದರೆ ಒಂದೇ ಒಂದು ದಿನ ರಾಜ್ಯ ಸರ್ಕಾರವಾಗಲಿ, ಸಂಸದರಾಗಲಿ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡುವಂತೆ ಧ್ವನಿ ಎತ್ತಲಿಲ್ಲ. ಆದರೆ ಈಗ ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement