Connect with us

Corona

ಕೊರೊನಾ ನಿಯಂತ್ರಣ – ಕುವೈತ್‍ನಲ್ಲಿ ಇಳಿಯಿತು ಭಾರತೀಯ ವೈದ್ಯರ ತಂಡ

Published

on

ನವದೆಹಲಿ: ಕೊರೊನಾ ನಿಯಂತ್ರಣ ಸಂಬಂಧ ಭಾರತದ 15 ಮಂದಿ ವೈದ್ಯರ ತಂಡ ಕುವೈತ್ ದೇಶಕ್ಕೆ ತೆರಳಿದೆ.

ಕ್ಷಿಪ್ರ ಪ್ರತಿಕ್ರಿಯೆ ಪಡೆಯ 15 ಮಂದಿ ಸದಸ್ಯರು ವಾಯುಸೇನೆ ಸಿ130 ವಿಮಾನದಲ್ಲಿ ಇಂದು ಕುವೈತ್ ತಲುಪಿದ್ದಾರೆ. ಕೊರೊನಾ ನಿಯಂತ್ರಣ ಸಂಬಂಧ ಎರಡು ದೇಶಗಳ ಪ್ರಧಾನಿಗಳು ಮಾತುಕತೆ ನಡೆಸಿದ್ದರು. ಕುವೈತ್ ಜೊತೆಗಿನ ಉತ್ತಮ ಬಾಂಧವ್ಯದ ಹಿನ್ನೆಲೆಯಲ್ಲಿ ಭಾರತ ವೈದ್ಯರನ್ನು ಕಳುಹಿಸಿಕೊಟ್ಟಿದೆ.

ಭಾರತದ ವೈದ್ಯರ ತಂಡ ಕೊರೊನಾ ಪರೀಕ್ಷೆ ಮತ್ತು ಚಿಕಿತ್ಸೆ ನಡೆಸುವ ವಿಧಾನದ ಬಗ್ಗೆ ಅಲ್ಲಿನ ಆರೋಗ್ಯ ಸಿಬ್ಬಂದಿಗೆ 2 ವಾರಗಳ ಕಾಲ ತರಬೇತಿ ನೀಡಲಿದ್ದಾರೆ. ಕುವೈತ್ ಸರ್ಕಾರದ ಮನವಿಯ ಮೇರೆಗೆ ಭಾರತದ ವೈದ್ಯರ ತಂಡ ತೆರಳಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕುವೈತ್ ನಲ್ಲಿ 993 ಮಂದಿಗೆ ಕೊರೊನಾ ಬಂದಿದ್ದು ಓರ್ವ ರೋಗಿ ಮೃತಪಟ್ಟಿದ್ದು, 133 ಮಂದಿ ಗುಣಮುಖರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಹಾಯ ಮಾಡಲೆಂದು ಭಾರತದ ವೈದ್ಯರು ಒಂದು ದೇಶಕ್ಕೆ ತೆರಳುತ್ತಿರುವುದು ಇದು ಮೊದಲು. ಕೊರೊನಾ ನಿಯಂತ್ರಣ ಸಂಬಂಧ ನೆರೆಯ ರಾಷ್ಟ್ರಗಳ ಜೊತೆಗಿನ ಮಾತುಕತೆಯ ವೇಳೆ ಪ್ರಧಾನಿ ಮೋದಿ ಭಾರತದ ಕ್ಷಿಪ್ರ ಪ್ರತಿಕ್ರಿಯೆ ಪಡೆ ಸಹಾಯ ಪಡೆಯಬಹುದು ಎಂದು ತಿಳಿಸಿದ್ದರು. ಮುಂದೆ ಭಾರತದ ಒಂದು ತಂಡ ನೇಪಾಳ ಮತ್ತು ಮಾಲ್ಡೀವ್ಸ್ ಗೆ ತೆರಳುವ ಸಾಧ್ಯತೆಯಿದೆ.

ಸಾರ್ಕ್ ರಾಷ್ಟ್ರಗಳು ಅಲ್ಲದೇ ವಿಶ್ವದ ಹಲವು ರಾಷ್ಟ್ರಗಳ ನಾಯಕರ ಜೊತೆ ಮೋದಿ ಮಾತನಾಡಿದ್ದಾರೆ. ಶುಕ್ರವಾರ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ  ಒಲಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆಯ ಜೊತೆ ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಮಾತನಾಡಿದ್ದರು.

ಕೊರೊನಾಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ. ಆದರೆ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿದ ಹಿನ್ನೆಲೆಯಲ್ಲಿ ಅಮೆರಿಕ, ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿದೆ.