Connect with us

Bengaluru City

ಕೋವಿಡ್‍ನಿಂದ ಮೃತಪಟ್ಟವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಅನುಮತಿ – ಅಶೋಕ್

Published

on

– ಬೆಂಗಳೂರಿನ ತಾವರಕೆರೆಯಲ್ಲಿ ಕಟ್ಟಿಗೆಯಲ್ಲಿ ಸುಡಬಹುದು
– ಸಿದ್ದರಾಮಯ್ಯ, ಕುಮಾರಸ್ವಾಮಿ ಸಲಹೆಯನ್ನು ಪಾಲಿಸುತ್ತೇವೆ

ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟವರಿಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್‍ನಿಂದ ಮೃತಪಟ್ಟವರಿಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ಹೇಳಿದರು.

 

ನಾಳೆಯಿಂದ ಪ್ರತೀ 3 ಗಂಟೆಗೆ 50 ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುತ್ತಿದೆ. ನೀರಿನ ಸಂಪರ್ಕ ಕೂಡ ಲಭ್ಯವಾಗಿದೆ. ಅಂಬುಲೆನ್ಸ್‍ಗಳು ರಸ್ತೆಯಲ್ಲಿ ಸಾಲು-ಸಾಲಾಗಿ ನಿಲ್ಲಬಾರದು. ಹೀಗಾಗಿ ಶವ ಸಂಸ್ಕಾರಕ್ಕೆ ಬರುವ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಬಂದ ತಕ್ಷಣ ಯಾವುದೇ ವಿಳಂಬವಿಲ್ಲದೆ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಇದಕ್ಕಾಗಿ ಎರಡು ಕೆಎಸ್‍ಆರ್‍ಪಿ ತುಕಡಿ ಕೂಡ ನಿಯೋಜನೆ ಮಾಡಿದ್ದೇವೆ. ಈ ವಿಚಾರದಲ್ಲಿ ಬೆಂಗಳೂರಿನ ಮೇಲಿರುವ ಒತ್ತಡ ನೂರಕ್ಕೆ ನೂರು ಕಡಿಮೆಯಾಗಿದೆ. ಯಾವುದೇ ಶವ ಸಂಸ್ಕಾರಕ್ಕೂ ಇನ್ನು ಮುಂದೆ ಕ್ಯೂ ಇರುವುದಿಲ್ಲ ಎಂದರು.

ಹಳ್ಳಿಗಳಲ್ಲೂ ಶವ ಸಂಸ್ಕಾರ ಮಾಡಬಹುದು. ಆದರೆ ಪಿಡಿಇಗಳಿಂದ ಅನುಮತಿ ಪಡೆಯಬೇಕು. ಸೋಂಕಿನಿಂದ ಮೃತರಾದವರನ್ನು ದಫನ್ ಮಾಡಬಹುದು. ತಾವರೆಕೆರೆಯಲ್ಲಿ ಇಂತಹ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಕಟ್ಟಿಗೆಯಲ್ಲಿ 50 ಶವ ಸುಡಲು ಅವಕಾಶವಿದೆ. ಇದಕ್ಕಾಗಿ ಈಗಾಗಲೇ 30 ಲೋಡ್ ಕಟ್ಟಿಗೆ ತರಿಸಲಾಗಿದೆ. ಇನ್ನೂ 30 ಲೋಡ್ ಕಟ್ಟಿಗೆ ಬರಲಿದೆ. ನೀರಿಗಾಗಿ ಬೋರ್‍ವೆಲ್ ಹಾಕಲಾಗಿದೆ. ಆಂಬ್ಯುಲೆನ್ಸ್ ನಿಲ್ಲಿಸಲು ಟೆಂಟ್ ಹಾಕಿದ್ದೇವೆ. ಬಂದ ಜನರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದೆ. ಏಕ ಕಾಲದಲ್ಲಿ 25 ಶವಗಳನ್ನು ಸುಡಬಹುದು. ಬೂದಿ, ಇನ್ನಿತರ ವೇಸ್ಟೇಜ್ ಸಂಗ್ರಹಕ್ಕೆ ಹಳ್ಳವನ್ನು ತೋಡಲಾಗಿದೆ ಎಂದು ವಿವರಿಸಿದರು.

ನಾಳೆಯಿಂದ ಶವ ಸುಡಲು ಯಾವುದೇ ಸಮಸ್ಯೆಯಾಗಲ್ಲ. ಇನ್ನೊಂದು ಕಡೆ 50 ಎಕರೆ ಭೂಮಿ ಗುರುತಿಸಿದ್ದೇವೆ. ಅಲ್ಲಿ ಸೋಮವಾರದಿಂದ ಶವ ಸುಡಲು ವ್ಯವಸ್ಥೆಯಾಗಲಿದೆ. ಬೇರೆ ಜಿಲ್ಲೆಗಳಲ್ಲೂ ಶವ ಸಂಸ್ಕಾರಕ್ಕೆ ಸೂಚಿಸಿದ್ದೇವೆ. ಗೋಮಾಳ ಭೂಮಿಯಲ್ಲೂ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಡಿಸಿಗಳಿಗೆ ಸೂಚಿಸಿದ್ದೇವೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಯಾವ ಸಲಹೆ ಕೊಡುತ್ತಾರೆ ಆ ಸಲಹೆಗಳನ್ನು ನಾವು ಕಾರ್ಯರೂಪಕ್ಕೆ ತರುತ್ತೇವೆ ಎಂದಿದ್ದಾರೆ.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರ ಹೇಳಿಕೆಯನ್ನೂ ಗಮನಿಸಿದ್ದೇನೆ. ಇಬ್ಬರ ಟೀಕೆಗಳನ್ನೂ ಸಲಹೆ ಎಂದು ಸ್ವೀಕರಿಸಿ ಕೆಲಸ ಮಾಡುತ್ತೇವೆ. ಜೆಡಿಎಸ್, ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯ ಇದೆ. ಕಾಂಗ್ರೆಸ್ ಅಧ್ಯಕ್ಷರು ಮೊದಲು ಸತ್ತವರಿಗೆ ಸರಿಯಾಗಿ ಸಂಸ್ಕಾರ ಮಾಡಿ ಎಂದಿದ್ದಾರೆ. ಆದರೆ ಜೆಡಿಎಸ್‍ನವರು ಮೊದಲು ಬದುಕಿರುವವರಿಗೆ ವ್ಯವಸ್ಥೆ ಮಾಡಿ ಎಂದಿದ್ದಾರೆ. ಎರಡನ್ನೂ ಕೂಡ ನಾವು ಪಾಲನೆ ಮಾಡುತ್ತಿದ್ದೇವೆ ಎಂದರು.

 

ವಾರಾಂತ್ಯದ ಕರ್ಫ್ಯೂ ಜಾರಿ ವಿಚಾರವಾಗಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಯಾರೆಲ್ಲಾ ಓಡಾಡಬಹುದು ಎಂಬ ಬಗ್ಗೆ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ತುರ್ತು ಸೇವೆ ಒದಗಿಸುವವರು, ತುರ್ತು ಸೇವೆ ಒದಗಿಸುವ ಕಂಪನಿಗಳು, ಟೆಲಿಕಾಂ, ಇಂಟರ್ ನೆಟ್  ಸರ್ವೀಸ್‍ನವರು, ರೋಗಿಗಳು ಹಾಗೂ ಅವರ ಸಹಾಯಕರು, ವ್ಯಾಕ್ಸಿನ್ ಪಡೆಯುವ ನಾಗರಿಕರು, ಆಸ್ಪತ್ರೆಗೆ ತೆರಳುವವರಿಗೆ ಅವಕಾಶವಿದೆ. ಕಂಪನಿಗಳಿಗೆ ತೆರಳುವವರು ಐಡಿ ಕಾರ್ಡ್ ತೋರಿಸುವುದು ಕಡ್ಡಾಯ. ದಿನಸಿ, ಹಣ್ಣು, ತರಕಾರಿ, ಮಾಂಸದ ಅಂಗಡಿ ಬೆಳಿಗ್ಗೆ 6ರಿಂದ 10ರವರೆಗೆ ತೆರೆದಿರಬಹುದು. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಕೇವಲ ಪಾರ್ಸಲ್ ನೀಡಲು ಅವಕಾಶವಿದೆ. ಸಾರ್ವಜನಿಕರು ಟ್ಯಾಕ್ಸಿ, ಆಟೋ ಬಳಸಬಹುದು. ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳಲು ಅವಕಾಶವಿದೆ. ಆದರೆ ಟಿಕೇಟ್ ತೋರಿಸುವುದು ಕಡ್ಡಾಯ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *