Connect with us

Chikkamagaluru

ಪಿಪಿಇ ಕಿಟ್ ಧರಿಸಿ ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

Published

on

ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರವನ್ನು ನಾನೇ ಮಾಡಬೇಕೆಂದು ಹಠ ಹಿಡಿದು ಮಗಳೇ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನ ಬಿಡದಿಯ ಟೊಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ಕೊರೋನಾ ಚಿಕಿತ್ಸೆಯಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗಿ ವ್ಯಾಪಿಸುತ್ತಿದ್ದರಿಂದ ಇತ್ತೀಚಿಗಷ್ಟೆ ಊರಿಗೆ ಬಂದಿದ್ದ ಕುಟುಂಬ ಇಬ್ಬರು ಹೆಣ್ಣು ಮಕ್ಕಳನ್ನು ಮೂಡಿಗೆರೆಯಲ್ಲೇ ಬಿಟ್ಟು ದಂಪತಿ ಮಾತ್ರ ಬೆಂಗಳೂರಿಗೆ ವಾಪಸಾಗಿದ್ದರು.

ಮೊನ್ನೆ ಪತ್ನಿ ಸೇರಿದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿ ಶೀಘ್ರವೇ ಡಿಸ್ಚಾರ್ಜ್ ಆಗುವುದಾಗಿ ತಿಳಿಸಿದ್ದರು. ಆದರೆ ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದು ಕುಟುಂಬ ಕಂಗಾಲಾಗುವಂತೆ ಮಾಡಿತ್ತು.

ಭಾನುವಾರ ಸ್ವಗ್ರಾಮ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಗೆ ಮೃತದೇಹವನ್ನು ತಂದಾಗ ಹತ್ತಿರದಿಂದ ತಂದೆಯನ್ನು ನೋಡಲಾಗುತ್ತಿಲ್ಲ ಅಂತ ಇಬ್ಬರು ಹೆಣ್ಣುಮಕ್ಕಳು ಕಣ್ಣೀರಿಟ್ಟಿದ್ದು ಹೃದಯ ಕಲಕುವಂತಿತ್ತು.

 

ಕೊನೆಗೆ ತಾನೇ ಅಪ್ಪನ ಅಂತ್ಯ ಸಂಸ್ಕಾರ ಮಾಡಬೇಕೆಂದು ಹಿರಿಯ ಮಗಳು ಹಠ ಹಿಡಿದಾಗ, ಹಿರಿಯರು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೃತರ ಪತ್ನಿಗೆ ಪಿಪಿಇ ಕಿಟ್ ಹಾಕಿಸಿಕೊಂಡು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟರು.

ಮೂಡಿಗೆರೆಯ ಶಿವಗಿರಿ ಸೇವಕರ ತಂಡ ಯಾವುದೇ ಹಣ ಪಡೆಯದೇ ಅಂತ್ಯಸಂಸ್ಕಾರದ ಕಾರ್ಯವನ್ನು ನೆರವೇರಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬೆಂಗಳೂರಿಗೆ ಹೋಗಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ವ್ಯಕ್ತಿಯ ಸಾವಿಗೆ ಇಡೀ ಊರಿಗೆ ಊರೇ ಕಂಬನಿ ಮಿಡಿದಿದೆ.

Click to comment

Leave a Reply

Your email address will not be published. Required fields are marked *