Connect with us

Districts

ಕೋವಿಡ್ 3ನೇ ಅಲೆ ಸಂಭವ – ಮಕ್ಕಳ ಸಂರಕ್ಷಣೆ, ಚಿಕಿತ್ಸೆಗೆ ಸಂಬಂಧಿಸಿದಂತೆ ಸಚಿವೆ ಶಶಿಕಲಾ ಜೊಲ್ಲೆ ಸಭೆ

Published

on

Share this

ತುಮಕೂರು: ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಸಕಲ ರೀತಿಯಲ್ಲಿಯೂ ಸಜ್ಜಾಗುವ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿದರು.

ಕೋವಿಡ್ ಮೂರನೇ ಅಲೆ ಎದುರಾದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಸಜ್ಜಾಗಿರಬೇಕು ಎಂದು ನಿರ್ದೇಶಿಸಿದರು. ಕೋವಿಡ್ ಮೂರನೇ ಅಲೆಗೆ ಹೆಚ್ಚಿನ ಮಕ್ಕಳು ಬಾಧಿತರಾಗುವ ನಿರೀಕ್ಷೆಯಿದ್ದು, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ವ್ಯವಸ್ಥೆ, ಆಮ್ಲಜನಕ, ವೆಂಟಿಲೇಟರ್ ಸೇರಿದಂತೆ ಅಗತ್ಯ ಸಿದ್ಧತೆ ಕೈಗೊಳ್ಳುವುದರೊಂದಿಗೆ ಶಿಶುತಜ್ಞ ವೈದ್ಯರನ್ನು ನೇಮಕ ಮಾಡಿಕೊಂಡು ವೈದ್ಯಕೀಯ ಸೌಲಭ್ಯ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅನಾಥ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ: ಜಿಲ್ಲೆಯಲ್ಲಿ ಕೋವಿಡ್‍ನಿಂದ ಪೋಷಕಕರಿಬ್ಬರನ್ನು ಕಳೆದುಕೊಂಡು ಅನಾಥವಾಗುವ ಅಥವಾ ಒಬ್ಬರು ಪೋಷಕರನ್ನು ಕಳೆದುಕೊಂಡು ಏಕ ಪೋಷಕತ್ವದಲ್ಲಿರುವ ಮಕ್ಕಳಿಗೆ ಪಾಲನಾ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಂತಹ ಮಕ್ಕಳಿಗಾಗಿ ಸರ್ಕಾರದಿಂದ ಜಾರಿಗೊಳಿಸಿರುವ ಬಾಲ ಸೇವಾ ಯೋಜನೆ, ಮಾಸಾಶನ, ಉಚಿತ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಉನ್ನತ ಶೈಕ್ಷಣಿಕ ದೃಷ್ಟಿಯಿಂದ ಲ್ಯಾಪ್‍ಟಾಪ್ ವಿತರಣೆ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಮಕ್ಕಳು ಅನ್ಯಾಯಕ್ಕೆ ಒಳಗಾಗಬಾರದು ಎಂದು ಸೂಚಿಸಿದರು.

ಮಕ್ಕಳ ಭವಿಷ್ಯ ರೂಪಿಸಲು ಕೊಂಡಿ: ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ, ಕಾನೂನು ಅನುಸಾರ ಯಾರಾದರೂ ದಾನಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭವಿಷ್ಯ ರೂಪಿಸಲು ಮುಂದೆ ಬಂದಲ್ಲಿ ಇಲಾಖೆಯು ಕೊಂಡಿಯಾಗಿ ಕಾರ್ಯನಿರ್ವಹಿಸಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ಕಲ್ಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ಗೆ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಎಂಟ್ರಿ

ಹೆಚ್ಚು ಅರಿವು ಮೂಡಿಸಿ: ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿಯೂ ಮಕ್ಕಳು ಕೋವಿಡ್ ಬಾಧಿತರಾಗಿದ್ದು, ಮೂರನೆ ಅಲೆಯ ಕೋವಿಡ್ ನಿಂದ ಮಕ್ಕಳನ್ನು ಮುಕ್ತಗೊಳಿಸಲು ಪೋಷಕರಿಗೆ ಹೆಚ್ಚು ಅರಿವು ಮೂಡಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

ಆತಂಕ ದೂರ ಮಾಡಿ: ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಬೆಂಗಳೂರಿಗೆ ಸಮೀಪವಿರುವ ತುಮಕೂರು ಜಿಲ್ಲೆಯು ಎರಡನೇ ಅಲೆಯಲ್ಲಿ ಅತಂತ್ರ ಸ್ಥಿತಿಗೆ ತಲುಪಿತ್ತು. ಆದರೆ, ಜಿಲ್ಲಾಡಳಿತದ ಕ್ರಮದಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಆತಂಕ ದೂರವಾಗಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಮಕ್ಕಳನ್ನು ಬಾಧಿಸುವ ನಿರೀಕ್ಷೆಯಲ್ಲಿರುವ ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಪೋಷಕರಿಗೆ ಹೆಚ್ಚು ಅರಿವು ಮೂಡಿಸಬೇಕು. ಮನೆಯಲ್ಲಿಯೇ ಚಿಕಿತ್ಸೆ ನೀಡುವುದಕ್ಕಿಂತ ಕೋವಿಡ್ ಕೇರ್ ಸೆಂಟರ್ ನಲ್ಲಿ ಆರೈಕೆಗೆ ಹೆಚ್ಚು ಆದ್ಯತೆ ಕೊಡಬೇಕು. ಜಿಲ್ಲಾವಾರು ಬದಲು ಜನಸಂಖ್ಯೆಗೆ ಅನುಗುಣವಾಗಿ ಲಸಿಕೆಯನ್ನು ಸರ್ಕಾರದಿಂದ ಪೂರೈಕೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರಂತೆ ಕರ್ತವ್ಯ ನಿರ್ವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ಸಂರಕ್ಷಣೆ ಕ್ರಮ: ಸಭೆಯಲ್ಲಿದ್ದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ಸಂರಕ್ಷಣೆಗಾಗಿ ಎಲ್ಲಾ ರೀತಿಯಲ್ಲಿಯೂ ಕ್ರಮ ವಹಿಸಲಾಗಿದೆ. ಚಿಕಿತ್ಸಾ ವ್ಯವಸ್ಥೆಯನ್ನೂ ಸಹ ಎಲ್ಲ ರೀತಿಯಲ್ಲಿಯೂ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಹತ್ತು ಸಾವಿರ ಮಕ್ಕಳಿಗೆ ಕೋವಿಡ್: ಮೊದಲನೇ ಅಲೆಯ 2020-21ನೇ ಸಾಲಿನಲ್ಲಿ 2,382 ಮಕ್ಕಳಿಗೆ, ಅದಾದ ಬಳಿಕ 2021ರ ಏಪ್ರಿಲ್ ನವರೆಗೆ 2,386 ಹಾಗೂ 2021ರ ಮೇ ವರೆಗೆ 5,273 ಸೇರಿ ಒಟ್ಟು ಎರಡನೇ ಅಲೆಯಲ್ಲಿ 7,659 ಹಾಗೂ ಕೋವಿಡ್ ಪ್ರಾರಂಭವಾದಾಗಿನಿಂದ ಈವರೆಗೆ ಒಟ್ಟು 10,041 ಮಕ್ಕಳಿಗೆ ಕೋವಿಡ್ ದೃಢವಾಗಿದೆ. ಆದರೆ, ಯಾವುದೇ ಮಗು ಸಾವನ್ನಪ್ಪಿಲ್ಲ. ಬಹುತೇಕ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದಾರೆ. ಹಾಗೇ ಯಾವುದೇ ಮಗುವಿನಲ್ಲೂ ಬ್ಲಾಕ್ ಫಂಗಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾಹಿತಿ ಒದಗಿಸಿದರು. ಇದನ್ನೂ ಓದಿ:  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕವೇ ಅನಾಥ ಮಕ್ಕಳ ದತ್ತು ಪ್ರಕ್ರಿಯೆ: ಶಶಿಕಲಾ ಜೊಲ್ಲೆ

Click to comment

Leave a Reply

Your email address will not be published. Required fields are marked *

Advertisement