Recent News

ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್‍ಗೆ ಜಾಮೀನು

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ ದಿವಾಳಿ ಪ್ರಕರಣದಲ್ಲಿ ಖ್ಯಾತ ನಿರ್ಮಾಪಕ ಆನಂದ ಅಪ್ಪುಗೋಳ್ ಅವರಿಗೆ ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ಜಾಮೀನು ಮಂಜೂರು ಮಾಡಿದೆ.

ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿದ್ದ ಅಪ್ಪುಗೋಳ್ ಅವರು ಸಾರ್ವಜನಿಕರ ಠೇವಣಿ ಹಣವನ್ನು ಸಕಾಲಕ್ಕೆ ಪಾವತಿಸದೆ ಗ್ರಾಹಕರಿಗೆ ವಂಚನೆ ಮಾಡಿರುವ ಕುರಿತು ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪುಗೋಳ್ ಅವರಿಗೆ ಧಾರವಾಡ ಸಂಚಾರಿ ಹೈಕೋರ್ಟ್ ಜಾಮೀನು ನೀಡಿದೆ.

ರಾಯಣ್ಣ ಸೊಸೈಟಿಯ ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ ಆರೋಪದಲ್ಲಿ ಸೆ. 4ರಂದು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಂದ ಬ್ಯಾಂಕ್ ಅಧ್ಯಕ್ಷರು, ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್ ಸೇರಿ ಆಡಳಿತ ಮಂಡಳಿ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ ಅಂತಾ ದೂರು ದಾಖಲಿಸಿದ್ದರು. ನಂತರದಲ್ಲಿ ಕೆಲ ಕಾಲ ತಲೆಮರೆಸಿಕೊಂಡಿದ್ದ ಅಪ್ಪುಗೋಳ್ ಅವರನ್ನು ಸೆ.17 ರಂದು ಪೊಲೀಸರು ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ನೋಟ್ ಬ್ಯಾನ್ ಆದ ನಂತರ ಸುಧಾರಿಸಿಕೊಳ್ಳಲಾಗದೇ ಬ್ಯಾಂಕ್‍ನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಸುಮಾರು 300 ಕೋಟಿ ರೂಪಾಯಿ ಠೇವಣಿ, 50 ಸಾವಿರ ಖಾತೆ ಹಾಗೂ 50 ಬ್ರಾಂಚ್ ಹೊಂದಿದ್ದ ಸೊಸೈಟಿ ಆರ್ಥಿಕವಾಗಿ ರೋಗಗ್ರಸ್ಥವಾದ ಹಿನ್ನೆಲೆಯಲ್ಲಿ ಗ್ರಾಹಕರು ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ್ದರು.

ಇದನ್ನೂ ಓದಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ್ ಅರೆಸ್ಟ್

ಇದಕ್ಕೂ ಮುನ್ನ ಪ್ರಕರಣದ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಆನಂದ ಅಪ್ಪುಗೋಳ್ ಅವರು, ಶೇ.35 ರಷ್ಟು ಹಣವನ್ನು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದೇವೆ. ಇದರಿಂದಾಗಿ ನಮಗೆ ಸಂಕಷ್ಟವಾಗಿದೆ. ಗ್ರಾಹಕರು ಯಾರು ಹೆದರುವ ಅವಶ್ಯಕತೆ ಇಲ್ಲ. ನನ್ನ ಸಮಸ್ತ ಆಸ್ತಿಯನ್ನ ಮಾರಿ ನಿಮ್ಮ ಹಣವನ್ನು ನೀಡುತ್ತೇನೆ. ದಯವಿಟ್ಟು ಸ್ವಲ್ಪ ಕಾಲಾವಕಾಶ ಕೊಡಿ. ನಾನು ಸತ್ತರೆ ನಿಮ್ಮೆಲ್ಲರ ಠೇವಣಿ ಹಣವನ್ನು ಕೊಟ್ಟು ಸಾಯುತ್ತೇನೆ. ಆದರೆ ಇವತ್ತು ನಾನು ನನ್ನ ಕುಟುಂಬ ಉಳಿಸಿಕೊಂಡು ಬದುಕಿಲ್ಲ. ನನ್ನ ಕುಟುಂಬ ಅಂದರೆ ಸಂಗೊಳ್ಳಿ ರಾಯಣ್ಣ ಪರಿವಾರ, ಠೇವಣಿದಾರರು ಮತ್ತು ಸಾಲಗಾರರು ಅವರೇ ನನ್ನ ಕುಟುಂಬದವರು. ನಾನು ಎಲ್ಲಿಯೂ ಓಡಿಹೋಗಲ್ಲ, ಸಾಯುವುದಿಲ್ಲ ಸ್ವಲ್ಪ ನನಗೆ ನಿಮ್ಮ ಹಣವನ್ನು ಕೊಡಲಿಕ್ಕೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದ್ದರು.

Leave a Reply

Your email address will not be published. Required fields are marked *