Connect with us

Districts

ಮನೆಮಗನಂತೆ ಸಾಕಿದ್ದ ಶ್ವಾನಕ್ಕೆ ಹುಟ್ಟುಹಬ್ಬ – ಬಿರಿಯಾನಿ ಊಟ ಹಾಕಿಸಿದ ದಂಪತಿ

Published

on

ಕೋಲಾರ: ಸಾಮಾನ್ಯವಾಗಿ ನಾಯಿಗಳನ್ನು ಕಂಡ್ರೆ ಕಲ್ಲು ಹೊಡೆಯೋರೆ ಜಾಸ್ತಿ, ಒಂದಷ್ಟು ಜನ ಅವುಗಳನ್ನ ಸಾಕಿ ಸಲುಹಿ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡೋರು ಇದ್ದಾರೆ. ಆದರೆ ಇಲ್ಲೊಂದು ಕುಟುಂಬ ಅದನ್ನ ತನ್ನ ಮನೆಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅದ್ದೂರಿಯಾಗಿ ಬರ್ತ್‍ಡೇ ಮಾಡಿ ಎಲ್ಲರಿಗೂ ಬಿರಿಯಾನಿ ಊಟ ಹಾಕಿಸಿದ್ದಾರೆ.

ಹೌದು. ಕೋಲಾರ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ವೆಂಕಟೇಶ್ ಹಾಗೂ ಅಮರಮ್ಮ ದಂಪತಿ ತಾವು ಸಾಕಿ ಬೆಳೆಸಿದ ಶ್ವಾನದ ಮರಿ ರಾಮುಗೆ 5 ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ. ತಾವು ತಮ್ಮ ಮಗನಂತೆ ಸಾಕಿದ ರಾಮುಗೆ ಪ್ರೀತಿ ತೋರುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ತಮ್ಮ ಹೆತ್ತ ಮಕ್ಕಳಿಗೆ ಹುಟ್ಟುಹಬ್ಬ ಆಚರಣೆ ಮಾಡಲು ಬಜೆಟ್ ಲೆಕ್ಕಾ ಹಾಕುವ ಇಂದಿನ ದಿನಗಳಲ್ಲಿ ಕೋಲಾರದ ಬ್ರಾಹ್ಮಣರ ಬೀದಿಯಲ್ಲಿರುವ ದಂಪತಿ ವಿಶೇಷವಾಗಿ ಕಾಣುತ್ತಾರೆ.

5 ನೇ ವರ್ಷದ ಹುಟ್ಟುಹಬ್ಬವನ್ನ ಹತ್ತಾರು ಜನರ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ರು. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಹೊಸ ಬಟ್ಟೆ ಹಾಕಿ ಕೇಕ್ ಕತ್ತರಿಸಿ, ಒಂದಷ್ಟು ಜನರಿಗೆ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬವನ್ನ ಹಬ್ಬದ ರೀತಿ ಆಚರಣೆ ಮಾಡಿ ಈ ಪ್ರಾಣಿ ಪ್ರಿಯ ದಂಪತಿ ಮಾದರಿಯಾಗಿದೆ.

ನಗರಸಭೆ ವಾಲ್ ಮೆನ್ ಆಗಿರುವ ದಂಪತಿಗೆ ಮಕ್ಕಳಿಲ್ಲ. ಹಾಗಾಗಿ ಈ ಶ್ವಾನ ರಾಮುವನ್ನೇ ತನ್ನ ಮಗನಂತೆ ನೋಡಿಕೊಳ್ಳುತ್ತಿರುವ ಇವರಿಗೆ ರಾಮುನನ್ನ ಯಾರೂ ಕೂಡ ನಾಯಿ ಎನ್ನುವಂತಿಲ್ಲ. 5 ವರ್ಷದ ಹಿಂದೆ ನಾಯಿ ಮರಿ ಕಣ್ಣು ಬಿಡುವ ಮುನ್ನವೇ ಮನೆಗೆ ತಂದಿರುವ ಈ ರಾಮುನನ್ನ ತನ್ನ ಮಗನಂತೆ ಪೋಷಣೆ ಮಾಡುತ್ತಿದ್ದಾರೆ. ಇಂದು ಹುಟ್ಟುಹಬ್ಬ ಹಿನ್ನೆಲೆ ಬೆಳಗ್ಗೆ ಎದ್ದು ಎಂದಿನಂತೆ ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗಿ ಎಲ್ಲವೂ ಒಳಿತಾಗಲಿ ಎಂದು ಬೇಡಿಕೊಂಡಿರುವ ಇವರು, ರಾಮುಗೆ ಹೊಸ ಬಟ್ಟೆ ಹಾಕಿ, ಕೇಕ್ ಕತ್ತರಿಸಿ, ಚಿಕನ್ ಬಿರಿಯಾನಿ ಹಾಗೂ ಫಿಶ್ ಕಬಾಬ್ ಮಾಡಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ರು. ಹುಟ್ಟು ಹಬ್ಬಕ್ಕೆ ಬಂದ ಗಣ್ಯರಂತೂ ಈ ದಂಪತಿ ಶ್ವಾನ ಪ್ರೀತಿಗೆ ಬೆರಗಾಗಿ ತಮ್ಮ ಮಕ್ಕಳಿಗೆ ಹುಟ್ಟುಹಬ್ಬ ಮಾಡಲು ಪುರುಸೋತ್ತಿಲ್ಲದೆ ಇವತ್ತಿನ ದಿನಗಳಲ್ಲಿ ಶ್ವಾನಕ್ಕೆ ಹುಟ್ಟುಹಬ್ಬ ಮಾಡಿರುವುದು ವಿಶೇಷವೇ ಸರಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ತಮಗೆ ಹುಟ್ಟಿದ ಮಕ್ಕಳನ್ನ ಇಂದು ಬೀದಿಯಲ್ಲಿ ಬಿಡುವ ಪೋಷಕರ ಮಧ್ಯೆ ನಾಯಿ ಮರಿಯನ್ನ ತನ್ನದೇ ಮಗುವಿನಂತೆ ಪೋಷಣೆ ಮಾಡುತ್ತಿರುವ ಈ ದಂಪತಿ ಇವತ್ತಿನ ದಿನಗಳಲ್ಲಿ ವಿಶೇಷವಾಗಿ ಕಾಣುತ್ತಾರೆ. ಇದೊಂದು ವಿಚಿತ್ರ ಸನ್ನಿವೇಶ ಅನಿಸಿದ್ರು, ಶ್ವಾನಕ್ಕಿರುವ ನಿಯತ್ತೆ ಇದಕ್ಕೆಲ್ಲ ಕಾರಣ ಅನ್ನೋದು ವಿಶೇಷ.

Click to comment

Leave a Reply

Your email address will not be published. Required fields are marked *