Connect with us

Bengaluru City

ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಕೊಲೆ

Published

on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ ನಡೆದಿದ್ದು, ಮಹದೇವಪುರದ ಜನರನ್ನು ಬೆಚ್ಚಿ ಬೀಳಿಸಿದೆ.

ಮಹದೇವಪುರದ ಉಡುಪಿ ಗಾರ್ಡನ್ ಹಿಂಭಾಗ ಈ ಜೋಡಿ ಕೊಲೆ ನಡೆದಿದ್ದು, ಮನೆಯಲ್ಲಿದ್ದ ಚಂದ್ರೇಗೌಡ, ಲಕ್ಷ್ಮಮ್ಮ ದಂಪತಿಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಿನ್ನಾಭರಣಕ್ಕಾಗಿ ದರೋಡೆಕೋರರು ವೃದ್ಧ ದಂಪತಿಯನ್ನು ಹತ್ಯೆ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು, ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಲೆ ನಡೆದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಟ್ಟೆ ಮತ್ತು ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ಬಿರುವಿನಲ್ಲಿದ್ದ ಬಟ್ಟೆಗಳನ್ನು ತೆಗೆದು ಮೃತರ ದೇಹದ ಮೇಲೆ ಹಾಕಿ ಹೋಗಿದ್ದಾರೆ ಎಂದು ವಿವರಿಸಿದರು.

ಮೇಲ್ನೋಟಕ್ಕೆ ಚಿನ್ನಾಭರಣ ಕಳುವಾಗಿರುವ ಬಗ್ಗೆ ಕಂಡು ಬರುತ್ತಿಲ್ಲ. ಪೋಲಿಸರು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರ ಇಲ್ಲವೇ ದ್ವೇಷದಿಂದ ಕೊಲೆ ನಡೆದಿದೆಯೋ ಅಥವಾ ಭೂ ಮಾಫಿಯಾದವರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಅಲ್ಲದೆ ಪರಿಚಯಸ್ಥರು ಯಾರಾದರೂ ಬಂದು ಕೊಲೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮೃತ ದಂಪತಿಗೆ ಒಬ್ಬ ಮಗಳಿದ್ದು, ಚಾಮರಾಜನಗರದಿಂದ ಬರುತ್ತಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.