Connect with us

Districts

ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಸಾವು

Published

on

ಗದಗ: ರಜೆ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದ ಯೋಧ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.

ವೀರಪ್ಪ ತಹಶೀಲ್ದಾರ (34) ಮೃತ ಯೋಧ. ಇವರು ನಿಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಬುಧವಾರ ರಾತ್ರಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ನಂತರ ಕೊರೊನಾ ವೈರಸ್‍ ಪರೀಕ್ಷೆಗೆ ಕಳುಹಿಸಲಾಗಿತ್ತು. ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇಂದು ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿತ್ತು.

ವೀರಪ್ಪ ಬಿಎಸ್‍ಎಫ್ ಪಶ್ಚಿಮ ಬಂಗಾಳದ 158ನೇ ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2006ರಿಂದ ದೇಶ ಸೇವೆಯಲ್ಲಿ ತೊಡಗಿದ್ದರು. ವೀರಪ್ಪ ರಜೆಗಾಗಿ ಶ್ಯಾಗೋಟಿ ಗ್ರಾಮಕ್ಕೆ ಬಂದಿದ್ದು, ಏಪ್ರಿಲ್ 15ಕ್ಕೆ ರಜೆ ಮುಗಿದಿತ್ತು. ಆದರೆ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ವಾಪಸ್ ಹೋಗಲು ಸಾಧ್ಯವಾಗದೆ ಗ್ರಾಮದಲ್ಲೇ ಉಳಿದುಕೊಂಡಿದ್ದರು.

ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಯೋಧ ಅಗಲಿದ್ದಾರೆ. ಗದಗ ಜಿಲ್ಲಾಡಳಿತದಿಂದ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.