Connect with us

Districts

ಕೊರೊನಾ ಅಬ್ಬರ – ಮಂಜಿನ ನಗರಿಯಲ್ಲಿ ಜನ ಸಂಚಾರ ವಿರಳ

Published

on

– ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮೊರೆ ಹೋದ ಜನರು
– ಪ್ರವಾಸಿ ತಾಣಗಳು ತೆರೆದಿದ್ದರೂ ಪ್ರವಾಸಿಗರೇ ಇಲ್ಲ

ಮಡಿಕೇರಿ: ಕೊರೊನಾ 2ನೇ ಅಲೆಯ ಆರ್ಭಟಕ್ಕೆ ರಾಜ್ಯದ ಜನರು ಬೆಚ್ಚಿಬೀಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕೊಡಗಿನಲ್ಲೂ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮಂಜಿನ ನಗರಿಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮೊರೆ ಹೋಗುತ್ತಿದ್ದಾರೆ.

ಮಂಜಿನ ನಗರಿ ಮಡಿಕೇರಿಯಲ್ಲಿ ಜನರು ಭಯಭೀತರಾಗುತ್ತಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮೊರೆ ಹೋಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳದ ಜನರಲ್ ತಿಮ್ಮಯ್ಯ ವೃತ್ತ, ಇಂದಿರಾಗಾಂಧಿ ಸರ್ಕಲ್ ಸೇರಿದಂತೆ ಬಹುತೇಕ ಜನದಟ್ಟಣೆಯ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಾಗುತ್ತಿದೆ. ನಿತ್ಯ ಜನ ಜಂಗುಳಿಯಿಂದ ಕೂಡಿದ ನಗರದಲ್ಲಿ ಜನ ಸಂಚಾರ ಕಡಿಮೆ ಆಗಿದೆ.

ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತಿವೆ. ಅನಿವಾರ್ಯ ಕಾರಣಗಳು ಇದ್ದವರು, ಕೆಲಸ ಕಾರ್ಯಗಳಿಗೆ ಹೋಗುವ ಜನರು ಮಾತ್ರ ಓಡಾಡುತ್ತಿದ್ದಾರೆ. ನಗರದ ಪ್ರದೇಶದಲ್ಲಿ ಸಂಚರಿಸುವ ಜನರ ಸಂಖ್ಯೆ ಕೂಡ ಮೊದಲಿಗಿಂತ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಜನರು ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿದ್ದು ಜಿಲ್ಲೆಯ ನಗರ ಪ್ರದೇಶಗಳಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರಿ ಕಚೇರಿಗಳಿಗೂ ಸಾಮಾನ್ಯ ಜನರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಗೋಣಿಕೋಪ್ಪ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ಜನ ಸಂಚಾರ ಅತ್ಯಂತ ವಿರಳವಾಗಿ ಕಂಡು ಬರುತ್ತಿದ್ದು, ಜನರೇ ಸ್ವಯಂಪ್ರೇರಿತವಾಗಿ ನಿರ್ಧಾರ ಮಾಡಿದ್ದು ಇತರೆ ಜಿಲ್ಲೆಗಳ ಜನರಿಗೆ ಕೊಡಗಿನ ಜನರು ಮಾದರಿಯಾಗುತ್ತಿದ್ದಾರೆ.

ಏಪ್ರಿಲ್ 3 ರಿಂದ ಬಂದ್ ಆಗಿದ್ದ ಕೊಡಗಿನ ಪ್ರವಾಸಿ ತಾಣಗಳು ಮತ್ತೆ ತೆರೆದಿದ್ದರೂ ಪ್ರವಾಸಿಗರೇ ಇಲ್ಲದೆ ಕೊಡಗಿನ ಪ್ರವಾಸಿತಾಣಗಳು ಬಣಗುಡುತ್ತಿವೆ. ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದ ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್, ಅಬ್ಬಿಫಾಲ್ಸ್ ಮತ್ತು ದುಬಾರೆ ನಿಸರ್ಗಧಾಮ ಮಂದಲ್ ಪಟ್ಟಿ ಸೇರಿದಂತೆ ಪ್ರಮುಖವಾದ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರೇ ಇಲ್ಲದೆ ಎಲ್ಲಾ ಬಿಕೋ ಎನ್ನುತ್ತಿವೆ.

ಸ್ಥಳೀಯರು ಕೊರೊನಾ ಅತಂಕ ಇರುವುದರಿಂದ ಪ್ರವಾಸಿತಾಣಗಳತ್ತ ಮುಖ ಮಾಡುತ್ತಿಲ್ಲ. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರನ್ನೇ ನಂಬಿಕೊಂಡು ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ನೂರಾರು ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ಪ್ರವಾಸಿಗರೇ ಇಲ್ಲದಿರುವುದರಿಂದ ಅಂಗಡಿ ಮುಂಗಟ್ಟುಗಳು ಖಾಲಿಹೊಡೆಯುತ್ತಿದ್ದು, ಪ್ರವಾಸಿಗರನ್ನೆ ನಂಬಿಕೊಂಡು ಬದುಕು ನಡೆಸುತ್ತಿದ್ದ ಅಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ರೆಸ್ಟೋರೆಂಟ್ ಹೋಟೆಲ್‍ಗಳಿಗೂ ಸಾಕಷ್ಟು ನಷ್ಟ ಉಂಟಾಗುತ್ತಿದೆ.

Click to comment

Leave a Reply

Your email address will not be published. Required fields are marked *