Connect with us

Corona

ಮಂಗ್ಳೂರು ಬಂದರಿನಲ್ಲಿ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಜನ – ಕೊರೊನಾ ನಿಯಂತ್ರಣ ಹೇಗೆ?

Published

on

– ಮೀನು ಖರೀದಿಗೆ ಮುಗಿಬಿದ್ದ ವ್ಯಾಪಾರಿಗಳು
– ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಧರಿಸಿಲ್ಲ
– ಜಿಲ್ಲಾಡಳಿತದಿಂದ ಕೊರೊನಾ ಸೋಂಕು – ಆರೋಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಇದೀಗ ಕೊರೊನಾ ಹಾಟ್‍ಸ್ಪಾಟ್ ಆಗಿದೆ. ಕೊರೊನಾ ಪಾಸಿಟಿವ್ ಕೇಸ್ ಕಡಿಮೆ ಆಯಿತು ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೆ ಮತ್ತೆ ಕೊರೊನಾ ಪಾಸಿಟಿವ್ ಹೆಚ್ಚಾಗಿ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಜಿಲ್ಲಾಡಳಿತವೇ ಇಡೀ ಜಿಲ್ಲೆಯ ಜನರಿಗೆ ಕೊರೊನಾ ಸೋಂಕನ್ನು ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊರೊನಾ ಹರಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ದಾರಿ ಮಾಡಿಕೊಟ್ಟಿರುವ ಬೆಳವಣಿಗೆ ನಡೆದಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ರಾತ್ರಿ ವೇಳೆ ಹೊರ ರಾಜ್ಯಗಳಿಂದ ಮೀನಿನ ಲಾರಿಗಳು ಬರುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಏರ್ಪಡುತ್ತಿದೆ.

ಕಳೆದ ನಾಲ್ಕು ದಿನಗಳಿಂದ ಜಿಲ್ಲಾಡಳಿತ ಮೀನು ಸರಬರಾಜಿಗೆ ಅನುಮತಿ ನೀಡಿದ್ದು, ಮಂಗಳೂರಿನ ಮೀನು ವ್ಯಾಪಾರಿಗಳು ಮೀನು ಖರೀದಿಗೆ ಮುಗಿಬಿದ್ದಿದ್ದಾರೆ. ಯಾವುದೇ ಸಾಮಾಜಿಕ ಅಂತರ ಇಲ್ಲದೆ 2 ಸಾವಿರಕ್ಕೂ ಹೆಚ್ಚು ಮಂದಿ ಬಂದರಿನಲ್ಲಿ ಸೇರುತ್ತಿದ್ದಾರೆ. ಅನ್ ಲೋಡಿಂಗ್ ಮತ್ತು ಏಲಂ ಮೂಲಕ ವಿತರಣೆ ಮಾಡುತ್ತಿದ್ದಾರೆ. ಮಾಸ್ಕ್, ಗ್ಲೌಸ್ ಯಾವುದೇ ರಕ್ಷಾ ಕವಚ ಇಲ್ಲದೆ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.

ದಿನಕ್ಕೆ ನೂರಕ್ಕೂ ಹೆಚ್ಚು ಹೊರ ರಾಜ್ಯದ ಲಾರಿಗಳು ಬರುತ್ತಿದ್ದು, ಇಲ್ಲಿಂದ ಖರೀದಿಸಿದ ಮೀನುಗಳನ್ನು ಮರುದಿನ ಕರಾವಳಿಯಾದ್ಯಂತ ಸರಬರಾಜು ಮಾಡಲಾಗುತ್ತೆ. ಈ ಮೂಲಕ ಉಚಿತವಾಗಿ ಕೊರೊನಾ ಕೂಡ ಗ್ರಾಮ ಗ್ರಾಮಗಳಿಗೆ ಸರಬರಾಜು ಆಗುವ ಅಪಾಯ ಎದುರಾಗಿದೆ. ಹಿಂದೆಲ್ಲಾ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಹೊರ ರಾಜ್ಯಕ್ಕೆ ಮೀನು ಸಾಗಾಟ ಆಗುತ್ತಿತ್ತು. ಈಗ ಕರ್ನಾಟಕದಲ್ಲಿ ಆಳಸಮುದ್ರ ಮೀನುಗಾರಿಕೆ ಇಲ್ಲದ ಕಾರಣ ಆಂಧ್ರ ಪ್ರದೇಶ, ತಮಿಳನಾಡು ಕಡೆಯಿಂದ ಮೀನು ಪೂರೈಕೆಯಾಗುತ್ತಿದೆ.

ಮುಸ್ಲಿಮರಿಗೆ ರಂಜಾನ್ ಆಗಿರುವ ಕಾರಣ ರಾತ್ರಿ ವೇಳೆ ಮೀನು ವಹಿವಾಟು ನಡೆಸಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದಿರುವುದು ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ.

ಇದೇ ರೀತಿ ಮುಂದುವರಿದರೆ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಕೊರೊನಾ ಫ್ರೀಯಾಗಿ ರಾಜ್ಯದೆಲ್ಲೆಡೆ ರವಾನೆಯಾಗುವ ಸಾಧ್ಯತೆಯಿದೆ. ಇಂತಹ ಅವ್ಯವಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಕಾರಣರಾಗಲಿದ್ದಾರೆ. ರಾಜ್ಯದೆಲ್ಲೆಡೆ ಲಾಕ್‍ಡೌನ್ ಇದ್ದರೂ ರೆಡ್‍ಝೋನ್ ಮಂಗಳೂರಿನಲ್ಲಿ ಮೀನು ವಹಿವಾಟಿಗೆ ಅವಕಾಶ ಕೊಟ್ಟಿದ್ದು, ಹೇಗೆ ಅನ್ನುವ ಪ್ರಶ್ನೆಗೆ ಸ್ವತಃ ಮೀನುಗಾರಿಕೆ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಉತ್ತರ ನೀಡಬೇಕಷ್ಟೆ.