Connect with us

Corona

3ನೇ ಪತ್ನಿಯ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ- ನಾಲ್ಕನೇ ಹೆಂಡ್ತಿಯಿಂದ ದೂರು

Published

on

– ಲಾಕ್‍ಡೌನ್ ಸಂದರ್ಭದಲ್ಲಿ ತಂದೆಯಿಂದ ಕೃತ್ಯ

ಹೈದರಾಬಾದ್: ಲಾಕ್‍ಡೌನ್ ಸಂದರ್ಭದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪಾಪಿ ತಂದೆಯೊಬ್ಬ ಅನೇಕ ಬಾರಿ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆ ಜಿಲ್ಲೆಯ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ಶಾಲಾ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಹೀಗಾಗಿ ಸಂತ್ರಸ್ತೆ ತನ್ನ ಮನೆಗೆ ವಾಪಸ್ ಆಗಿದ್ದಳು.

35 ವರ್ಷದ ಆರೋಪಿ ತಂದೆ ದೈನಂದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಆರೋಪಿ ಈಗಾಗಲೇ ನಾಲ್ಕು ಮದುವೆಯಾಗಿದ್ದಾನೆ. ಆತನ ಮೊದಲ ಮತ್ತು ಎರಡನೇ ಪತ್ನಿಗೆ ಡಿವೋರ್ಸ್ ನೀಡಿದ್ದನು. ಮೂರನೇ ಪತ್ನಿ ಮೃತಪಟ್ಟಿದ್ದಳು. ಸಂತ್ರಸ್ತೆ ಮೂರನೇ ಹೆಂಡತಿಯ ಮಗಳಾಗಿದ್ದಾಳೆ. ಆರೋಪಿ ಪ್ರಸ್ತುತ ತನ್ನ ತಾಯಿ, ನಾಲ್ಕನೇ ಪತ್ನಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ಲಾಕ್‍ಡೌನ್ ಸಂದರ್ಭದಲ್ಲಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆರೋಪಿಯ ಈ ಕೃತ್ಯದ ಬಗ್ಗೆ ಕುಟುಂಬದವರಿಗೆ ಗೊತ್ತಿರಲಿಲ್ಲ. ಆರೋಪಿ ತಂದೆ ಮನೆಯಲ್ಲಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ಸಂತ್ರಸ್ತೆ ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ಆದರೆ ಇತ್ತೀಚೆಗೆ ಮತ್ತೆ ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊನೆಗೆ ಸಂತ್ರಸ್ತೆ ತನ್ನ ಚಿಕ್ಕಮ್ಮನಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆಗ ಮಲತಾಯಿ ಪೊಲೀಸ್ ಠಾಣೆಗೆ ಹೋಗಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿದ್ದಾರೆ.