Connect with us

ಕೊರೊನಾದಿಂದ ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಯುವಕ

ಕೊರೊನಾದಿಂದ ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಯುವಕ

– ಬಳ್ಳಾರಿಯ ಕೊಳಗಲ್ ಗ್ರಾಮದಲ್ಲಿ 15ಕ್ಕೂ ಹೆಚ್ಚು ಸಾವು

ಬಳ್ಳಾರಿ: ಯುವಕನೊಬ್ಬ ಒಂದೇ ದಿನ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿ ತಾಂಡಾದಲ್ಲಿ ನಡೆದಿದೆ.

ಮಾಂತೇಶ್ ನಾಯಕ್ ಎಂಬಾತ ಒಂದೇ ದಿನ ತಾಯಿ ಸೀತಾ ಬಾಯಿ(58) ಮತ್ತು ತಂದೆ ನಾಕ್ಯಾ ನಾಯ್ಕ್(63)ರನ್ನು ಕಳೆದುಕೊಂಡಿದ್ದಾರೆ. ಬೆಳಗ್ಗೆ ತಂದೆ ಮೃತಪಟ್ಟರೆ, ಸಂಜೆ ಅವರ ತಾಯಿ ಸಾವನ್ನಪ್ಪಿದ್ದಾರೆ.

ಒಂದೇ ದಿನ ಗ್ರಾಮದಲ್ಲಿ 6 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರನ್ನು ಗ್ರಾಮದ ಸರೋಜಾ ಭಾಯಿ, ಗಿರಿಜಾ ಬಾಯಿ, ದಿನೇಶ್ ನಾಯಕ್, ಭೀಮಾ ನಾಯಕ್ ಎಂದು ಗುರುತಿಸಲಾಗಿದೆ. ಎಲ್ಲರೂ ಉಸಿರಾಟದ ತೊಂದರೆಯಿಂದ ಹಾಗೂ ನಾನಾ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕೊರೊನಾದಿಂದ ಗ್ರಾಮೀಣ ಪ್ರದೇಶಗಳು ಇದೀಗ ಸಾವಿನ ಮನೆಯಂತಾಗುತ್ತಿದ್ದು, ಗ್ರಾಮಸ್ಥರಲ್ಲೀಗ ಆತಂಕ ಮನೆ ಮಾಡಿದೆ.

ಇನ್ನೂ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ 15 ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇದೊಂದೇ ಗ್ರಾಮದಲ್ಲಿ 250 ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ವಿಚಾರ ಇದೀಗ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಎರಡು ವಾರಗಳ ಕಾಲ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಮಾಡಲು ಜನರು ಮುಂದಾಗಿದ್ದಾರೆ.

ಈ ಬಗ್ಗೆ ಗ್ರಾಮದಲ್ಲಿ ಅನಾವಶ್ಯಕವಾಗಿ ಅಂಗಡಿ ಮುಂಗಟ್ಟು ಓಪನ್ ಮಾಡಿದರೆ ದಂಡ ಹಾಕುವುದಾಗಿ ಗ್ರಾಮಸ್ಥರು ಡಂಗುರ ಸಾರಿದ್ದಾರೆ.

Advertisement
Advertisement