Connect with us

Bengaluru City

15 ದಿನ ರ‍್ಯಾಲಿ, ಪ್ರತಿಭಟನೆ, ಧಾರ್ಮಿಕ ಕಾರ್ಯಕ್ರಮಗಳು ಬಂದ್, ಲಾಕ್‍ಡೌನ್, ನೈಟ್ ಕರ್ಫ್ಯೂ ಇಲ್ಲ: ಸಿಎಂ

Published

on

– ಅಪಾರ್ಟ್‍ಮೆಂಟ್‍ನ ಕಾಮನ್ ಏರಿಯಾ, ಸ್ವಿಮ್ಮಿಂಗ್ ಪೂಲ್ ಬಂದ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರತಿಭಟನೆ, ರ‍್ಯಾಲಿ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋವಿಡ್ 19 ಪ್ರಕರಣ ಹೆಚ್ಚಳದ ಬಗ್ಗೆ ಎರಡು ಗಂಟೆಗಳ ಕಾಲ ತಜ್ಞರು, ಸಚಿವರು, ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಮುಂದಿನ 15 ದಿನಗಳ ಕಾಲ ರ‍್ಯಾಲಿ, ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ ಹೇರಲಾಗಿದೆ. ಮೇಳ, ಧಾರ್ಮಿಕ ಕಾರ್ಯಕ್ರಮ, ಅಪಾರ್ಟ್‍ಮೆಂಟ್‍ನ ಕಾಮನ್ ಏರಿಯಾ ಚಟುವಟಿಕೆಯನ್ನು ಸಹ ನಿಷೇಧಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಲಾಗಿದ್ದು, ಕ್ಲಬ್ ಗಳಲ್ಲಿ ಹಲವು ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ರೀತಿಯ ಲಾಕ್‍ಡೌನ್, ನೈಟ್ ಕರ್ಫ್ಯೂ ವಿಧಿಸುವುದಿಲ್ಲ. ನಾಳೆಯಿಂದ ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ, ತೆರೆದಿರುತ್ತವೆ. ಆದರೆ 1 ರಿಂದ 9ನೇ ತರಗತಿವರೆಗೆ ಕಡ್ಡಾಯವಾಗಿ ಪಾಸ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಕೋವಿಡ್ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಈಗಾಗಲೇ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು. ನಗರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ಸರ್ಕಾರ, ಬಿಬಿಎಂಪಿ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಈಗಾಗಲೇ ಹೆಚ್.ಎ.ಎಲ್. ಮತ್ತು ಹಜ್ ಭವನಗಳಲ್ಲಿ ತಲಾ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸಹ 250 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಏಪ್ರಿಲ್ 5ರಿಂದ ಆರಂಭವಾಗಲಿದೆ. ಸ್ಲಂಗಳಲ್ಲಿ ಕೋವಿಡ್ ಸಂಖ್ಯೆ ವಿರಳವಾಗಿರುವುದು ಸಮಾಧಾನದ ಸಂಗತಿಯಾಗಿದೆ. ಅಪಾರ್ಟ್‍ಮೆಂಟ್‍ಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ಸೋಂಕಿತರ ಪ್ರಮಾಣ ಶೇ.0.94 ಇತ್ತು ಮಾರ್ಚ್ ನಲ್ಲಿ ಶೇ.1.94 ಕ್ಕೆ ಹೆಚ್ಚಿದೆ. ಪ್ರಸ್ತುತ 15,882 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೆ 6.61 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ನಿಗದಿತ ಗುರಿಗಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೇ.90ಕ್ಕೂ ಹೆಚ್ಚು ಆರ್ ಟಿಪಿಸಿಆರ್ ಪರೀಕ್ಷೆಗಳನ್ನೇ ನಡೆಸಲಾಗುತ್ತಿದೆ. ಕೋವಿಡ್ ಪರೀಕ್ಷೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರತಿ ವಾರ್ಡಿನಲ್ಲಿ 2 ಮೊಬೈಲ್ ಮತ್ತು 1 ಸ್ಟಾಟಿಕ್ ತಂಡಗಳನ್ನು ನಿಯೋಜಿಸಲಾಗಿದೆ. ಸಂಪರ್ಕಿತರ ಪತ್ತೆಗೆ ಕಂದಾಯ, ಶಿಕ್ಷಣ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಸಂಪರ್ಕಿತರ ಪತ್ತೆಯ ಗುರಿಯನ್ನು ಸಹ 30ಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ ಎಂದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 1,166 ಬೆಡ್‍ಗಳನ್ನು ಮೀಸಲಿಡಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಹಾಸಿಗೆಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು. ಖಾಸಗಿ ಆಸ್ಪತ್ರೆಗಳೂ ಸಹಕರಿಸುವಂತೆ ಹಾಗೂ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳನ್ನು ಒದಗಿಸಲು ಸಿದ್ಧರಿರುವಂತೆ ತಿಳಿಸಲಾಗಿದೆ. ಬಿಬಿಎಂಪಿ ಎಂಟು ವಲಯಗಳಿಗೆ ಹಿರಿಯ ಅಧಿಕಾರಿಗಳನ್ನು ಈಗಾಗಲೇ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ಪ್ರಯಾಣಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರು ಜಾಗೃತರಾಗಿ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಗಟ್ಟಿ. ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಎಲ್ಲ ಅರ್ಹ ನಾಗರಿಕರೂ ಲಸಿಕೆ ಹಾಕಿಸಿಕೊಳ್ಳಬೇಕು. ಶಿಕ್ಷಕರಿಗೂ ಕೋವಿಡ್ ಲಸಿಕೆ ಹಾಕಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ತಿಳಿಸಿದರು.

Click to comment

Leave a Reply

Your email address will not be published. Required fields are marked *